ಮೈಸೂರು : ಮಾಜಿ ಸಚಿವ ರಾಮದಾಸ್ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ವಿರುದ್ಧ ಸ್ವಪಕ್ಷೀಯ ಶಾಸಕರೇ ತಿರುಗಿ ಬಿದ್ದಿದ್ದಾರೆ. ಗ್ಯಾಸ್ ಪ್ರಾಜೆಕ್ಟ್ ಮಾಡಲು ಹೋಗಿ ಪ್ರತಾಪ್ ಸಿಂಹರಿಗೆ ಶೇಪ್ ಔಟ್ ಆಗಿದೆ.
ಮನೆ ಮನೆಗೆ ಗ್ಯಾಸ್ ಪೈಪ್ಲೈನ್ ಅಳವಡಿಕೆಗೆ ಪ್ರತಾಪ್ ಸಿಂಹ ಅವರ ಪ್ರಸ್ತಾವನೆಯನ್ನ ಮೈಸೂರು ಮಹಾನಗರ ಪಾಲಿಕೆ ಎರಡು ಬಾರಿ ತಿರಸ್ಕರಿಸಿದೆ. ರಸ್ತೆ ಅಗೆದು ಮನೆಮನೆಗೆ ಗ್ಯಾಸ್ ಸಂಪರ್ಕ ಮಾಡುವ ಯೋಜನೆಗೆ ಪಾಲಿಕೆ ಸದಸ್ಯರು, ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಸಕ ಎಲ್. ನಾಗೇಂದ್ರ ಅವರು, ಅಗೆದ ರಸ್ತೆಯನ್ನ ಪ್ರತಾಪ್ ಸಿಂಹ ಬಂದು ಮುಚ್ಚುತ್ತಾರಾ.? ರಸ್ತೆ ಹಾಳಾಗುವ ಯೋಜನೆ ಮಾಡಲು ನಾವು ಬಿಡುವುದಿಲ್ಲ ಎಂದು ಪ್ರತಾಪ್ ಸಿಂಹರಿಗೆ ಬಿಜೆಪಿ ಶಾಸಕ ಎಲ್. ನಾಗೇಂದ್ರ ತಿರುಗೇಟು ನೀಡಿದರು.
ಹೆಚ್ಚು ಲೀಡ್‌ನಲ್ಲಿ ಗೆದ್ದಿದ್ದೇನೆ ಎಂಬ ಸಂಸದರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಎಲ್. ನಾಗೇಂದ್ರ ಅವರು, ನಮ್ಮಂತವರಿಂದ ಪ್ರತಾಪ್ ಸಿಂಹ ಗೆದ್ದಿರೋದು. ಪ್ರತಾಪ್ ಸಿಂಹರಿಗೆ ಮತ ಹಾಕಿಸಿರೋದು ನಾವೇ. ಪ್ರತಾಪ್ ಸಿಂಹ ರಾಜಕೀಯ ಅರಿತು ಮಾತನಾಡಬೇಕು. ನಾವು ಕಾರ್ಯಕರ್ತರು, ಕಾರ್ಪೊರೇಟರ್‌ಗಳಿಲ್ಲದಿದ್ರೆ ಗೆಲ್ಲುವುದಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ಜೆಡಿಎಸ್ ಅಭ್ಯರ್ಥಿಯನ್ನ ಕಣಕ್ಕಿಳಿಸಿರಲಿಲ್ಲ. ಹೀಗಾಗಿ, ಹೆಚ್ಚಿನ ಲೀಡ್ ಬಂತು. ನಾನು ನನ್ನ ಕ್ಷೇತ್ರದಲ್ಲಿ ಹೆಚ್ಚಿನ ಮತ ಹಾಕಿಸಿದ್ದೇನೆ. ನನ್ನ ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಬಂದಿದ್ರು. ನಾನು ಮತ ಹಾಕಿಸಿದ್ದು ಪ್ರತಾಪ್‌ಸಿಂಹಗೆ ಎಂದು ಟಾಂಗ್ ಕೊಟ್ಟರು.
ನಾನು ಕೂಡ ಈ ಬಾರಿ ಒಂದು ಲಕ್ಷ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ. ಅಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಕೆಲಸದಿಂದ ಜನರ ವಿಶ್ವಾಸಗಳಿಸಬೇಕೇ ಹೊರತು ಮಾತಿನಿಂದಲ್ಲ ಎಂದು ಪ್ರತಾಪಸಿಂಹ ವಿರುದ್ಧ ಶಾಸಕ ಎಲ್. ನಾಗೇಂದ್ರ ವಾಗ್ದಾಳಿ ನಡೆಸಿದರು.
ಓದಿ: ಹೊಸ ವೈರಸ್ ಸುಳಿವು ಕೊಟ್ಟ ವಿಜ್ಞಾನಿಗಳು: 'ನಿಯೋಕೋವ್' ಸೋಂಕಿತ ಮೂವರಲ್ಲಿ ಒಬ್ಬನ ಸಾವು ಖಚಿತವಂತೆ!