ಮೈಸೂರು: ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಪ್ರೀತಿಯ ಕೋತಿ ಚಿಂಟುಗಾಗಿ ಮಾಜಿ ಸಚಿವ ಹಾಗೂ ಶಾಸಕ ಸಾ.ರಾ.ಮಹೇಶ್ ದೇವಾಲಯ ಕಟ್ಟಿಸಲು ಮುಂದಾಗಿದ್ದಾರೆ.
ಮೈಸೂರಿನ ದಟ್ಟಗಳ್ಳಿಯಲ್ಲಿರುವ ತಮ್ಮ ತೋಟದಲ್ಲಿ ಸಾ.ರಾ.ಮಹೇಶ್, ಚಿಂಟು ಹೆಸರಿನ ಕೋತಿ ಸಾಕಿದ್ದರು. ಅವರು ಸಿಂಗಾಪುರ್ ಪ್ರವಾಸಕ್ಕೆ ತೆರಳಿದ್ದ ವೇಳೆ ವಿದ್ಯುತ್ ಸ್ಪರ್ಶದಿಂದ ಚಿಂಟು ಮೃತಪಟ್ಟಿತ್ತು. ವಿಷಯ ತಿಳಿದು ಶಾಸಕ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಆಗಿ ಅದರ ಅಂತ್ಯಕ್ರಿಯೆ ನೆರವೇರಿಸಿದ್ದರು.
ಅದರ ನೆನಪು ಸದಾ ಕಾಡುತ್ತಿರುವುದರಿಂದ ಚಿಂಟುವಿನ ಹೆಸರಿನಲ್ಲಿ ದಟ್ಟಗಳ್ಳಿಯಲ್ಲಿರುವ ತಮ್ಮ ತೋಟದಲ್ಲಿ ಸ್ಮಾರಕದೊಂದಿಗೆ ದೇವಾಲಯ ಕಟ್ಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.