ಮೈಸೂರು: ತೋಟದಲ್ಲಿ ಸಾವನ್ನಪ್ಪಿದ್ದ ಪ್ರೀತಿಯ ಕೋತಿಗಾಗಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾರುತಿ ದೇವಾಲಯವೊಂದನ್ನ ಮೈಸೂರು ಜಿಲ್ಲೆಯ ಕೆ.ಆರ್.ನಗರದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ನಿರ್ಮಿಸುತ್ತಿದ್ದಾರೆ.
ನಗರದ ಹೊರವಲಯದ ದಟ್ಟಗಳ್ಳಿಯಲ್ಲಿ ತೋಟದ ಮನೆಯಲ್ಲಿ ಗುಂಪಿನಿಂದ ಬೇರ್ಪಟ್ಟ ಕೋತಿ ಮರಿಯೊಂದು ತೋಟದಲ್ಲಿ ಸಾಕಿರುವ ಕುರಿಮರಿಯೊಂದಿಗೆ ಹಾಗೂ ಶಾಸಕ ಮಹೇಶ್ ಜೊತೆಗೆ ಅನ್ಯೋನ್ಯವಾಗಿತ್ತು. ಈ ಕೋತಿ ಮರಿಯನ್ನು ತುಂಬಾ ಪ್ರೀತಿಸುತ್ತಿದ್ದ ಶಾಸಕರು ಹೊಸ ವರ್ಷದ ನಿಮಿತ್ತ ವಿದೇಶಿ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕೋತಿ ಮರಿ ಸಾವನ್ನಪ್ಪಿತ್ತು.
ಈ ವಿಚಾರ ತಿಳಿದ ಶಾಸಕ ಸಾ.ರಾ.ಮಹೇಶ್, ಕೋತಿಯ ಮೇಲಿನ ಪ್ರೀತಿಯಿಂದಾಗಿ ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್ ಬಂದು ಕೋತಿಯ ಅಂತ್ಯಕ್ರಿಯೆಯನ್ನು ತಮ್ಮ ತೋಟದಲ್ಲಿ ನೆರವೇರಿಸಿದ್ದರು.
ಈಗ ಕೋತಿಯ ಅಂತ್ಯಕ್ರಿಯೆ ನಡೆಸಿದ ಸ್ಥಳದಲ್ಲೇ ಮಾರುತಿ ದೇವಾಲಯ ಕಟ್ಟಿಸುತ್ತಿದ್ದು, ಈ ದೇವಾಲಯದಲ್ಲಿ ಕುರಿಮರಿಯ ಮೇಲೆ ಕೋತಿ ಮರಿ ಕುಳಿತಿರುವ ವಿಗ್ರಹ ಸಿದ್ದವಾಗಿದೆ.
ಇನ್ನು ಈ ವಿಗ್ರಹಕ್ಕೆ ಕಲಾವಿದ ಅರುಣ್ ಯೋಗಿರಾಜ್ ಅಂತಿಮ ರೂಪ ನೀಡುತ್ತಿದ್ದು, ಇದೇ ತಿಂಗಳು ದೇವಾಲಯ ಉದ್ಘಾಟನೆಯಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಸಾ.ರಾ ಮಹೇಶ್ ಮಾಹಿತಿ ನೀಡಲು ನಿರಾಕರಿಸಿದ್ದು, ದೇವಾಲಯ ನಿರ್ಮಾಣವಾಗುತ್ತಿರುವುದು ಸತ್ಯ ಎಂದಿದ್ದಾರೆ.