ಮೈಸೂರು: ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಕ್ಕೆ ಹೋಗುವ ಮಾತೇ ಇಲ್ಲ. ನಾನು ಜೆಡಿಎಸ್ ಪಕ್ಷದ ಶಾಸಕ. ಪಕ್ಷದಲ್ಲಿಯೇ ಇರುತ್ತೇನೆ ಎಂದು ಹೇಳುವ ಮೂಲಕ ಪಕ್ಷ ಬಿಡುತ್ತಾರೆ ಎಂಬ ಊಹಾಪೋಹಗಳಿಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತೆರೆ ಎಳೆದಿದ್ದಾರೆ.
ಮೈಸೂರಿನ ಬಸವೇಶ್ವರ ನಗರದಲ್ಲಿ ಸಾವಯವ ಆಹಾರ ಮಳಿಗೆ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಜೆಡಿಎಸ್ ಬಿಟ್ಟು ಯಾವ ಪಕ್ಷದ ಕಡೆಯು ನಾನು ಮುಖ ಮಾಡುವುದಿಲ್ಲ ಎಂದರು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ರಾಜ್ಯದಲ್ಲಿರುವ ಸ್ಥಿರ ಸರ್ಕಾರವನ್ನ ಮುನ್ನಡೆಸಿಕೊಂಡು ಹೋಗುವ ಶಕ್ತಿಯಿದೆ. ಅಷ್ಟೇ ಕಷ್ಟವೂ ಇದೆ. ಅವರು ಯಶಸ್ವಿಯಾಗಿ ರಾಜ್ಯವನ್ನು ಅಭಿವೃದ್ಧಿ ಪಡಿಸಿ, ಆಡಳಿತ ನಡೆಸಲಿ ಎಂದು ಆಶಯ ವ್ಯಕ್ತಪಡಿಸಿದರು.
ಹುಣಸೂರು ಉಪಚುನಾವಣೆಯಲ್ಲಿ ಪರಾಜಿತಗೊಂಡಿರುವ ಎಚ್.ವಿಶ್ವನಾಥ್ ಅವರನ್ನು ಸಚಿವ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ, ಈ ವಿಚಾರದಲ್ಲಿ ನಾನು ಯಾರಿಗೂ ಏನನ್ನು ಹೇಳುವುದಿಲ್ಲ. ಏನಾದ್ರೂ ನಾನು ವಿಶ್ವನಾಥ್ ಮಂತ್ರಿ ಮಾಡಿ ಅಂತಾ ಹೇಳಿದ್ರೆ, ನನ್ನ ವಿರುದ್ಧವೇ ತಿರುಗಿಬೀಳುವ ಸಾಧ್ಯತೆಯಿದೆ. ಇವನ್ಯಾರು ಮಂತ್ರಿ ಮಾಡಿ ಅಂತಾ ಹೇಳೊಕೆ ಎಂದು ಕೇಳಬಹುದು. ಹೀಗಾಗಿ ನಾನು ಯಾರ ಪರವೂ ಮಾತಾನಾಡುವುದಿಲ್ಲ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆದಷ್ಟು ಬೇಗ ಗುಣಮುಖರಾಗಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಳ್ಳುತ್ತೇನೆ. ನಾನು ಸಿದ್ದರಾಮಯ್ಯ ಹಲವು ದಶಕಗಳಿಂದ ಸ್ನೇಹಿತರು. ಅವರು ವಿಶ್ರಾಂತಿ ಪಡೆಯದೇ ಸದಾಕಾಲವೂ ಓಡಾಡುವ ವ್ಯಕ್ತಿ. ಹೀಗಾಗಿ ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಹಾರೈಸಿದರು.