ಮೈಸೂರು: 'ನಿನಗೆ ತಾಕತ್ತಿದ್ದರೆ ಡಿಸಿ ವರ್ಗಾವಣೆ ಮಾಡಿಸು' ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಸಂಸದ ಪ್ರತಾಪ್ ಸಿಂಹ ಅವರಿಗೆ ಸವಾಲು ಹಾಕಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಸುಖಾ ಸುಮ್ಮನೆ ಹಾದಿಬೀದೀಲಿ ನಿಂತು ಮಾತನಾಡಬೇಡ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಹುಲಿ ಆಗಲ್ಲ' ಎಂದು ಕುಟುಕಿದರು.
'ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡಿ. ಜಿಲ್ಲೆಯ ಶಾಸಕರು ನಿಮಗಿಂತ ಹೆಚ್ಚು ಕೆಲಸ ಮಾಡ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದನಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿದ್ದೀಯ ಹೇಳು?. ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು, ಆಡಳಿತ ಪಕ್ಷದವರಲ್ಲ. ಸ್ಟೇಟ್‌ಮೆಂಟ್ ಕೊಟ್ಟು ಗೊಂದಲ ಯಾಕೆ ಮೂಡಿಸ್ತೀರಾ? ಜನರು ಮೈಸೂರಿನ ಬಗ್ಗೆ ಆಡಿಕೊಂಡು ನಗುತ್ತಿದ್ದಾರೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
'ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ'
'ನಿಮ್ಮ ಹೇಳಿಕೆ, ಆರೋಪಗಳ ಹಿಂದೆ ವೈಯಕ್ತಿಕ ಸಮಸ್ಯೆ ಇದೆ. ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ. ಕೊರೊನಾದಿಂದ ರಾಜ್ಯದಲ್ಲಿ ಅನೇಕ ಜನರು ಸಾಯ್ತಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲು ಹೊರಟಿರುವುದು ಸರಿಯಲ್ಲ. ಜನರ ಕಷ್ಟ ನೋಡುವ ಬದಲು ದೆಹಲಿಗೆ ಹೋಗುವ ಅಗತ್ಯವಿತ್ತೇ?. ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕೆಲಸ ಮಾಡಲು ಬಿಡಿ. ಸರ್ಕಾರ ಬೀಳಸಲು ಪ್ರಯತ್ನ ಮಾಡಿರುವುದು ಸರಿಯಲ್ಲ' ಎಂದು ಹೇಳಿದರು.
'ಒಬ್ಬ ಮಾತ್ರ ಹೀರೋ, ನಾವೆಲ್ಲ ಝೀರೋನಾ?'
ಸಾ.ರಾ.ಮಹೇಶ್ ಮಾತ್ರ ಮೈಸೂರು ಜಿಲ್ಲೆಯಲ್ಲಿ ಕೆಲಸ ಮಾಡ್ತಿದ್ದಾರೆ ಎಂದಿದ್ದ ಪ್ರತಾಪ್‌ಸಿಂಹಗೆ ತಿರುಗೇಟು ನೀಡಿದ ಜಿಟಿಡಿ, ಒಬ್ಬ ಮಾತ್ರ ಹೀರೋ, ನಾವೆಲ್ಲ ಝೀರೋನಾ? ಎಂದು ಇದೇ ವೇಳೆ ಕಿಡಿ ಕಾರಿದರು.
‘ಸಂಸದರೆ ನೀವೇನು ಮಾಡಿದ್ದೀರಿ..?’
ಜಿಲ್ಲಾಧಿಕಾರಿಗಳ ವಿರುದ್ದ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಸರಿಯಲ್ಲ, ಶಾಸಕರು ಸ್ವಂತ ಹಣ ವಿನಿಯೋಗಿಸಿ ಕೆಲಸ ಮಾಡುತ್ತಿದ್ದಾರೆ ಸಂಸದರಾದ ನೀವು ಸ್ವಂತ ಹಣದಲ್ಲಿ ಏನಾದರೂ ಯಾರಿಗಾದರೂ ಅಕ್ಕಿ ಕೊಟ್ಟಿದ್ದೀರಾ..? ಆ್ಯಂಬುಲೆನ್ಸ್ ಕೊಟ್ಟಿದ್ದೀರಾ..? ಲೆಕ್ಕಾ ಕೊಡಿ ಎಂದು ಗುಡುಗಿದರು.
ಪೇಪರ್ ಸ್ಟೇಟ್ಮೆಂಟ್ನಿಂದ ಯಾರೂ ಹುಲಿಯಾಗಲೂ ಸಾಧ್ಯವಿಲ್ಲ, ಗೆಲ್ಲಲು ಸಾಧ್ಯವಿಲ್ಲ. ಅಲ್ಲದೇ ಇಂತಹ ಕೊರೊನಾ ಸಂಕಷ್ಟದ ದಿನಗಳಲ್ಲಿ ಸಿಎಂ ಬದಲಾವಣೆಗೆ ಡೆಲ್ಲಿಗೆ ಹೋಗುತ್ತಿರುವುದು ಸರಿಯಲ್ಲ, ಇವರು ಜನಪರರಾಗಿದ್ದಾರೆಯೇ ಎಂದು ವಾಗ್ದಾಳಿ ನಡೆಸಿದರು.