ಮೈಸೂರು: ಕೆಲವು ವರ್ಷಗಳ ಹಿಂದೆ ಸದ್ದು ಮಾಡಿದ್ದ ಚರ್ಚ್ ಗಳ ಮೇಲಿನ ದಾಳಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಜಿಲ್ಲೆಯ ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೇಂಟ್ ಮೇರಿ ಚರ್ಚ್ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಅಲ್ಲಿದ್ದ ಪೀಠೋಪಕರಣ, ಬಾಲಯೇಸು ಮೂರ್ತಿಯನ್ನು ಒಡೆದು ಹಾಕಿ ಹಣ ದೋಚಿ ಪರಾರಿಯಾಗಿದ್ದಾರೆ.
ಪಿರಿಯಾಪಟ್ಟದ ಸೇಂಟ್ ಮೇರಿಸ್ ಚರ್ಚ್ನಲ್ಲಿ ಕಳ್ಳತನವಾಗಿದ್ದು, ಕೆಲವು ವಸ್ತುಗಳನ್ನ ಕಳ್ಳರು ಹಾನಿ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ರಿಸ್ಮಸ್ ಅಂಗವಾಗಿ ಚರ್ಚ್ನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್ನ ಮುಂಭಾಗದಲ್ಲಿ ಬಾಲ ಯೇಸುವಿನ ಪ್ರತಿಮೆ ಸ್ಥಾಪನೆ ಮಾಡಲಾಗಿದ್ದು, ಕ್ರಿಸ್ಮಸ್ ಹಿನ್ನೆಲೆ ಚರ್ಚ್ಗೆ ಪ್ರವೇಶಿಸಲು ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಲಾಗಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಕಳ್ಳರು ಚರ್ಚ್ಗೆ ನುಗ್ಗಿ ಎಂಟು ಮೈಕ್ಗಳು, ಹುಂಡಿ ಒಡೆದು ಹಣ ದೋಚಿದ್ದಾರೆ. ಅಷ್ಟೇ ಅಲ್ಲ, ಬಾಲ ಯೇಸುವಿನ ಪ್ರತಿಮೆಯನ್ನು ಒಡೆದು ಹಾಕಿ, ಕೆಲವು ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.
ಚರ್ಚ್ನ ಫಾದರ್ ಕ್ರಿಸ್ಮಸ್ ರಜೆ ಇದ್ದ ಕಾರಣ ಮೈಸೂರಿಗೆ ಹೋಗಿದ್ದರು. ಅವರು ನಿನ್ನೆ ಚರ್ಚ್ಗೆ ವಾಪಸ್ ಬಂದು ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳ ಭೇಟಿ.. ಘಟನೆ ಸಂಬಂಧ ದೂರು ದಾಖಲು ಆಗುತ್ತಿದ್ದಂತೆ ಮಂಗಳವಾರ ರಾತ್ರಿ ಹೆಚ್ಚುವರಿ ಎಸ್ಪಿ ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಭೇಟಿ ನೀಡಿ ಪರಿಶೀಲಿಸಿದರು. ಕಳ್ಳರ ಬಂಧನಕ್ಕೆ ತಂಡ ರಚಿಸಿದ್ದಾರೆ. ಈ ಬಗ್ಗೆ ಈಟಿವಿ ಭಾರತ್ ದೂರವಾಣಿ ಮೂಲಕ ಎಸ್ಪಿ ಅವರನ್ನು ಸಂಪರ್ಕಿಸಿದಾಗ, ಘಟನೆ ಬಗ್ಗೆ ಸ್ಥಳಿಯ ಪೊಲೀಸರಿಂದ ಮಾಹಿತಿ ಪಡೆಯಲಾಗಿದೆ. ಶೀಘ್ರವೇ ಈ ಪ್ರಕರಣವನ್ನು ಭೇದಿಸುವುದಾಗಿ ಹೇಳಿಕೆ ನೀಡಿದರು.
ಓದಿ: ದೂರು ಕೊಡಲು ಹೋದ ವಕೀಲನ ಮೇಲೆ ಪಿಎಸ್ಐಯಿಂದ ಹಲ್ಲೆ : ಕಾಂಗ್ರೆಸ್ ಕಾರ್ಯಕರ್ತರ ಆರೋಪ