ಮೈಸೂರು: ನಾನು ಸಿನಿಮಾದಲ್ಲೂ ನಾಯಕ, ರಾಜಕೀಯದಲ್ಲೂ ನಾಯಕ. ಆದರೆ, ನನ್ನನ್ನು ಖಳನಾಯಕನನ್ನಾಗಿ ಮಾಡುವ ಯತ್ನ ನಡೆಯುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವಲತ್ತು ಕೊಂಡರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಜೊತೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಮಾಧ್ಯಮಗಳು ಹಾಗೂ ನನ್ನ ಸ್ನೇಹಿತರು ನನ್ನನ್ನು ಖಳನಾಯಕನನ್ನಾಗಿ ಮಾಡಿದ್ದಾರೆ. ಇದು ಮನಸ್ಸಿಗೆ ಬಹಳ ನೋವಾಗಿದೆ. ಅದರಿಂದ ಸ್ವಾಮೀಜಿ ಮುಂದೆ ನೋವನ್ನು ಹೇಳಿಕೊಂಡರೆ ಹಗುರವಾಗುತ್ತದೆ ಎಂದು ಮಠಕ್ಕೆ ಬಂದಿದ್ದೀನಿ ಎಂದರು.
ವೈಯಕ್ತಿಕವಾಗಿ ನಾನು ನೀಡಿದ ಒಂದೇ ಒಂದು ಹೇಳಿಕೆಯಿಂದ ಇಷ್ಟೆಲ್ಲ ಚರ್ಚೆ ನಡೆದಿದೆ. ಇದರಿಂದ ನಾನು ಬಹಳ ನೊಂದಿದ್ದೇನೆ. ಇದರ ಹಿಂದೆ ಯಾರದೋ ಪ್ರಚೋದನೆ ಇರಬಹುದು ಎಂದು ಹೇಳಿದರು.
ಎಸ್ಕಾರ್ಟ್ ಇಲ್ಲದೆ ಮಠಕ್ಕೆ ಬಂದಿರೋದು ವಿಶೇಷವೇನಲ್ಲ : ಎಸ್ಕಾರ್ಟ್ ಇಲ್ಲದೆ ಮಠಕ್ಕೆ ಬಂದಿರುವುದು ವಿಶೇಷವೇನಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಬಳಸುತ್ತಿಲ್ಲ. ಎಸ್ಕಾರ್ಟ್ ಇಲ್ಲದೆ ಓಡಾಡಿದರೂ ನಾನು ಸಚಿವನೇ.. ಕೊರೊನಾದಿಂದ ಪೊಲೀಸರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಎಸ್ಕಾರ್ಟ್ ಬಳಸಿಲ್ಲ ಎಂದರು.
ಸ್ವಾಮೀಜಿ ಜೊತೆ ಚರ್ಚೆ : ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಬದಲಾವಣೆ ವಿಚಾರವಾಗಿ ದೆಹಲಿಗೆ ತೆರಳಿ ವಾಪಸ್ ಬಂದಿದ್ದ ಸಚಿವ ಸಿ.ಪಿ.ಯೋಗೇಶ್ವರ್, ರಾಜ್ಯದಲ್ಲಿ ರಾಜಕೀಯ ಬದಲಾವಣೆ ಚರ್ಚೆ ಹಿನ್ನೆಲೆ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯೊಂದಿಗೆ ಚರ್ಚಿಸಿದ್ದಾರೆ.