ಮೈಸೂರು : ಅಪಘಾತದಿಂದ ಕಳೆದೊಂದು ವರ್ಷದಿಂದ ಕೋಮಾ ಸ್ಥಿತಿಯಲ್ಲಿರುವ ಸರ್ಕಾರಿ ಶಾಲಾ ಶಿಕ್ಷಕನ ಮನೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ನಂಜನಗೂಡು ತಾಲೂಕಿನ ಹಂಡುವಿನಹಳ್ಳಿ ಬಡಾವಣೆಯ ನಿವಾಸಿ ಮಹದೇವಸ್ವಾಮಿ(52) ಅವರ ನಿವಾಸಕ್ಕೆ ಸಚಿವರು ಭೇಟಿ ನೀಡಿ, ಪತ್ನಿಯಿಂದ ಶಿಕ್ಷಕನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.
ನಂಜನಗೂಡಿನ ಭುಜಗಯ್ಯನ ಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಮಹದೇವಸ್ವಾಮಿ, ಕಳೆದ ವರ್ಷ ಕರ್ತವ್ಯಕ್ಕೆಂದು ಶಾಲೆಗೆ ಹೋಗುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು.
ಬಳಿಕ ಅವರು ಕೋಮಾ ಸ್ಥಿತಿಗೆ ತಲುಪಿದರು. ಈ ಘಟನೆ ನಡೆದು ವರ್ಷ ಕಳೆದರೂ, ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಕೂಡ ಪ್ರಯೋಜನವಾಗಿಲ್ಲ. ಮಹದೇವಸ್ವಾಮಿ ಪತ್ನಿ ಮಂಜುಳಾ ಅವರು ಶಿಕ್ಷಣ ಸಚಿವರ ಭೇಟಿಗಾಗಿ ಮನವಿ ಮಾಡಿಕೊಂಡಿದ್ದರು.
ಈ ಹಿನ್ನೆಲೆ ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿವರು, ಶಿಕ್ಷಣ ಇಲಾಖೆಯಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದರು. ಹಾಗೆಯೇ ಸ್ವಯಂನಿವೃತ್ತಿ ಪಡೆಯುವಂತೆ ಸಲಹೆ ನೀಡಿ, ಈವರೆಗೂ ಸಿಗಬೇಕಾದ ಬಾಕಿ ಭತ್ಯೆಗಳ ಪಾವತಿಗೆ ಸೂಚಿಸಿದರು. ಮಹದೇವಸ್ವಾಮಿ ಪತ್ನಿ ಮಂಜುಳಾಗೆ ವಿದ್ಯಾರ್ಹತೆಯ ಆಧಾರದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಅನುಕಂಪದ ಹುದ್ದೆ ನೀಡುವುದಾಗಿ ಹೇಳಿದರು.
ಓದಿ: ವಿಧಾನ ಪರಿಷತ್ನಲ್ಲಿ ಹೈಡ್ರಾಮಾ - ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ಕಿತ್ತಾಟ
ಶಿಕ್ಷಣ ಸಚಿವರ ಹೇಳಿಕೆ:
''ಕಳೆದ ವರ್ಷ ಅಪಘಾತದಲ್ಲಿ ಕೋಮಾ ಸ್ಥಿತಿಗೆ ಜಾರಿರುವ ಶಿಕ್ಷಕ ಮಹದೇವಸ್ವಾಮಿಯವರ ಮನೆಗೆ ಸದ್ಯ ಆಧಾರ ಇಲ್ಲದಂತಾಗಿದೆ. ಇವರ ಸ್ಥಿತಿಯನ್ನು ನಾನು ಗಮನಿಸಿದ್ದೇನೆ. ಈ ರೀತಿಯ ಪರಿಸ್ಥಿತಿ ಧಾರವಾಡದಲ್ಲೂ ಒಬ್ಬ ಶಿಕ್ಷಕನಿಗೆ ಆಗಿತ್ತು.
ಹಾಗಾಗಿ, ನಮ್ಮ ಇಲಾಖೆಯಿಂದ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ನೀಡುತ್ತೇನೆ, ಬಾಕಿ ಇರುವ ಎಲ್ಲಾ ಭತ್ಯೆಗಳ ಪಾವತಿಗೆ ಸೂಚನೆ ನೀಡಿದ್ದು, ಮಹದೇವಸ್ವಾಮಿ ಪತ್ನಿ ಮಂಜುಳಾಗೆ ವಿದ್ಯಾರ್ಹತೆಯ ಆಧಾರದ ಮೇಲೆ ನಮ್ಮ ಇಲಾಖೆಯಲ್ಲಿ ಅನುಕಂಪದ ಹುದ್ದೆ ನೀಡುತ್ತೇವೆ'' ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.