ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒಬ್ಬರಿಗೊಬ್ಬರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಡಿ.ಕೆ. ಶಿವಕುಮಾರ್ ವಿರುದ್ಧ ಸ್ವಪಕ್ಷೀಯರೇ ಮಾಡಿರುವ ಡೀಲ್ ಆರೋಪ ವಿಚಾರವಾಗಿ ಅರಮನೆ ಬಳಿ ಪ್ರತಿಕ್ರಿಯಿಸಿದ ಅವರು, ನಾನು ಮೊದಲಿನಿಂದಲೂ ಹೇಳುತ್ತಿದ್ದೀನಿ, ಡಿ.ಕೆ ಶಿವಕುಮಾರ್ ವರ್ಸಸ್ ಸಿದ್ದರಾಮಯ್ಯ ನೂರಕ್ಕೆ ನೂರರಷ್ಟು ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಷಡ್ಯಂತ್ರ ನಡೆಸುತ್ತಿದ್ದಾರೆ. ಯಾರನ್ನೋ ಬಲಿಪಶು ಮಾಡಲು ಷಡ್ಯಂತ್ರ ನಡೆಯುತ್ತಿದೆ. ನನಗೆ ಪರ್ಸೆಂಟೇಜ್ ವ್ಯವಹಾರ ಬಗ್ಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ನಲ್ಲಿ ಶಾಸಕನಾಗಿದ್ದೆ ಅಷ್ಟೇ. ಈಗಿರುವ ಕಾಂಗ್ರೆಸ್ ನಾಯಕರೇ ಪರ್ಸೆಂಟೇಜ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಸಮ್ಮಿಶ್ರ ಸರ್ಕಾರವನ್ನು ಸಿದ್ದರಾಮಯ್ಯ ಕೆಡವಿದ್ದಾರೆ ಎಂಬ ಮಾಜಿ ಸಿಎಂ ಹೆಚ್ಡಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಸ್ ಟಿ ಸೋಮಶೇಖರ್, ಸಮ್ಮಿಶ್ರ ಸರ್ಕಾರ ಯಾಕೆ ಪತನವಾಯಿತು ಎಂಬುದು ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಕುಮಾರಸ್ವಾಮಿ ರಾತ್ರಿ 10 ಗಂಟೆ ನಂತರ ಕಣ್ಣು ಮುಚ್ಚಿ ಮಲಗಿ ಎಲ್ಲವನ್ನು ನೆನಪು ಮಾಡಿಕೊಳ್ಳಲಿ. ಆಗ ಅವರಿಗೆ ಎಲ್ಲ ಸತ್ಯ ಅರ್ಥವಾಗುತ್ತದೆ ಎಂದು ವ್ಯಂಗ್ಯವಾಡಿದರು.
ಚಾಮುಂಡಿ ದರ್ಶನ 2 ಗಂಟೆ ವಿಸ್ತರಣೆ
ಆಯುಧಪೂಜೆ ಹಾಗೂ ವಿಜಯದಶಮಿಯಂದು ಚಾಮುಂಡೇಶ್ವರಿ ದರ್ಶನ ಪಡೆಯಲು ಭಕ್ತರಿಗೆ ಅನುಕೂಲವಾಗಲೆಂದು ರಾತ್ರಿ 10ರ ವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದಕ್ಕೂ ಮೊದಲು ರಾತ್ರಿ 8ರ ವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿತ್ತು ಎಂದು ಹೇಳಿದರು.
ಓದಿ: ಮೈಸೂರಲ್ಲಿ ದಸರಾ ಸಂಭ್ರಮ: ಅಭಿಮನ್ಯು ನೇತೃತ್ವದ ಗಜಪಡೆಗೆ ವಿಶೇಷ ಪೂಜೆ