ಮೈಸೂರು: ಸಚಿವ ಆನಂದ್ ಸಿಂಗ್ ಖಾಸಗಿ ಕಾರ್ನಲ್ಲಿ ಹೋಗಿರುವುದು ದೊಡ್ಡ ವಿಷಯವೇನಲ್ಲ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ರು. ಹಾಲಿ ಹಾಗೂ ಮಾಜಿ ಸಿಎಂಗಳು ಅವರ ಜೊತೆ ಮಾತನಾಡಿದ್ದಾರೆ. ಸಮಸ್ಯೆ ಬಗೆಹರಿಯುತ್ತದೆ, ಅಂತಹ ಜಟಿಲ ಸಮಸ್ಯೆ ಏನೇ ಇದ್ದರೂ ಮುಖ್ಯಮಂತ್ರಿಗಳು ಬಗೆಹರಿಸಲು ಸಮರ್ಥರಿದ್ದಾರೆ. ನಮ್ಮ ಸಿಎಂ ಓಪನ್ ಮೈಂಡೆಡ್ ಇದ್ದಾರೆ. ಯಾರೇ ಕುಳಿತು ಅವರೊಂದಿಗೆ ಚರ್ಚೆ ಮಾಡಬಹುದು, ಈ ಸಮಸ್ಯೆಯೂ ಬಗೆಹರಿಯಲಿದೆ ಎಂದು ತಿಳಿಸಿದರು.
ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಿ,ಆತ್ಮಸ್ಥೈರ್ಯ ತುಂಬಿ:
ಕೇಂದ್ರ ಸಮಿತಿಯ ಶಿಫಾರಸಿನಂತೆ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಅಧಿಕಾರಿಗಳು ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಪೋಷಕರಿಗೆ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು. ಮೈಸೂರು- ಕೇರಳ ಗಡಿ ಜಿಲ್ಲೆಯಾದರೂ,ಕೊರೊನಾ ಪಾಸಿಟಿವಿಟಿ ಕಡಿಮೆ ಇದೆ. ಈ ಹಿನ್ನೆಲೆ ಇಲ್ಲಿ ಶಾಲೆ ತೆರೆಯಲು ಅನುಮತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದ್ರು.
ಶಾಲೆ ಆರಂಭಕ್ಕೂ ಮುನ್ನ ಶಿಕ್ಷಕರಿಗೆ ವ್ಯಾಕ್ಸಿನ್;
ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳಲ್ಲಿ ಒಟ್ಟು 9,088 ಶಿಕ್ಷಕರು ಇದ್ದಾರೆ. ಈ ಪೈಕಿ 5,875 ಶಿಕ್ಷಕರು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 2,417 ಶಿಕ್ಷಕರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 796 ಶಿಕ್ಷಕರು ಮಾತ್ರ ಇನ್ನೂ ಲಸಿಕೆ ಪಡೆದಿಲ್ಲ ಎಂದು ಸಚಿವರಿಗೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಶಾಲೆ ಆರಂಭಕ್ಕೂ ಈ ಎಲ್ಲಾ ಶಿಕ್ಷಕರಿಗೂ ಲಸಿಕೆ ನೀಡುವಂತೆ ಉಸ್ತುವಾರಿ ಸಚಿವರು ಸೂಚನೆ ನೀಡಿದರು. ಗ್ರಾಮಾಂತರದ ಶಾಲೆಗಳಲ್ಲಿ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವಿಚಾರದಲ್ಲಿ ನಿಗಾ ಇಡಲು ತಂಡವನ್ನು ರಚನೆ ಮಾಡಿದ್ದೇನೆ ಎಂದು ಹೇಳಿದರು.
ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಬೇಡ:
ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಬೇಡ ಅಂತ ಸಿಎಂಗೆ ಮನವಿ ಮಾಡಿದ್ದೇನೆ. ಮುಂದುವರಿಸಲೇಬೇಕು ಎಂದಾದರೆ, ಮಧ್ಯಾಹ್ನ 2 ರವರೆಗೆ ಎಲ್ಲ ವ್ಯಾಪಾರಿಗಳಿಗೂ ಅವಕಾಶ ಕೊಡಿ ಎಂದು ಸಿಎಂಗೆ ಹೇಳಿದ್ದೇನೆ. ಈ ಬಗ್ಗೆ ಸಿಎಂ ಯೋಚನೆ ಮಾಡ್ತಾರೆ ಎಂದು ತಿಳಿಸಿದರು.
ಪಂಜಾಬಿನ ಎಪಿಎಂಸಿಯಲ್ಲಿ ಒಂದು ಮಾಫಿಯಾವಿದೆ: ಶೋಭಾ ಕರಂದ್ಲಾಜೆ
ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವವರ ಜೊತೆ ಕೇಂದ್ರ ಸರ್ಕಾರ 11 ಬಾರಿ ಮಾತುಕತೆ ನಡೆಸಿದರೂ ಅವರು ಮಣಿಯುತ್ತಿಲ್ಲ. ಪಂಜಾಬಿನ ಎಪಿಎಂಸಿಯಲ್ಲಿ ಒಂದು ಮಾಫಿಯಾವಿದೆ. ದೆಹಲಿಯಲ್ಲಿ ಧರಣಿ ಕುಳಿತವರು ಪಂಜಾಬ್ ಮತ್ತು ಹರಿಯಾಣ ಮೂಲದ ಮಧ್ಯವರ್ತಿಗಳು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಹೇಳಿಕೆ ನೀಡಿದ್ದಾರೆ.
ಸಾಮಾನ್ಯ ಕೃಷಿಕರು ಧರಣಿಯಲ್ಲಿ ಭಾಗಿಯಾಗಿಲ್ಲ. ರೈತರ ಹೆಸರಿನಲ್ಲಿ ಕೆಲ ಸ್ಥಾಪಿತ ಹಿತಾಸಕ್ತಿಗಳು ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಷಡ್ಯಂತ್ರ ನಡೆಸುತ್ತಿವೆ. ನಿಜವಾದ ರೈತರು ಇಷ್ಟೊಂದು ದಿನ ಧರಣಿ ಮಾಡಲು ಸಾಧ್ಯವಿಲ್ಲ. ಇಲ್ಲಿ ಧರಣಿ ಮಾಡುತ್ತಿರುವವರು ರೈತರಲ್ಲ ಎಂದು ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ರು.
ಅಧಿವೇಶನ ನಡೆಯಲು ಕಾಂಗ್ರೆಸ್ ಬಿಡಲಿಲ್ಲ:
ಅಧಿವೇಶನ ನಡೆಯಲು ಕಾಂಗ್ರೆಸ್ ಬಿಡಲಿಲ್ಲ. ತೀರಾ ಅಸಹ್ಯವಾಗಿ ನಡೆದುಕೊಂಡರು. ಹೊಸ ಸಚಿವರನ್ನು ಪರಿಚಯ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಜನಾಶೀರ್ವಾದದ ಮೂಲಕ ವಿರೋಧ ಪಕ್ಷದ ದುರ್ನಡತೆ ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದರು. ಕೃಷಿ ಅಭಿವೃದ್ಧಿಗೆ ಕಾಂಗ್ರೆಸ್ ಎಷ್ಟು ಹಣ ನೀಡಿದೆ? ಬಿಜೆಪಿ ಎಷ್ಟು ಹಣ ನೀಡಿದೆ ಎಂಬ ಮಾಹಿತಿ ಗೂಗಲ್ನಲ್ಲಿ ಸಿಗುತ್ತದೆ. ಕೋವಿಡ್ ನಡುವೆಯೂ ಆಹಾರ ಉತ್ಪಾದನೆಯಲ್ಲಿ ಭಾರತ ಹೊಸ ದಾಖಲೆ ಬರೆದಿದೆ ಎಂದು ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಮ್ಮ ದೇಶದಲ್ಲಿ ಖಾದ್ಯ ತೈಲದ ಕೊರತೆ ಹೆಚ್ಚಾಗಿದೆ:
ಶೇ.70 ರಷ್ಟು ಖಾದ್ಯ ತೈಲಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ನಮ್ಮ ದೇಶದಲ್ಲಿ ಖಾದ್ಯ ತೈಲದ ಕೊರತೆ ಹೆಚ್ಚಾಗಿದೆ. ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಡೈರಿ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.