ಮೈಸೂರು: ಆರ್.ಆರ್. ಕ್ಷೇತ್ರದ ಉಪ ಚುನಾವಣೆಗೆ ಇಬ್ಬರ ಹೆಸರನ್ನು ಸೂಚಿಸಲಾಗಿದೆ. ಪಕ್ಷದ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಗಾಂಧಿ ಜಯಂತಿ ಅಂಗವಾಗಿ ನಗರದ ಗಾಂಧಿ ವೃತ್ತದಲ್ಲಿರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುನಿರತ್ನ ಹಾಗೂ ಮುನಿರತ್ನ ವಿರುದ್ಧ ಸೋತ ಅಭ್ಯರ್ಥಿ ಹೆಸರು ಪಕ್ಷದ ಹೈಕಮಾಂಡ್ ಕೈ ಸೇರಿದೆ. ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಿ ಮುಂದಿನ ನಿರ್ಧಾರವನ್ನು ಹೈಕಮಾಂಡ್ ಸೂಚಿಸುತ್ತದೆ. ನಾವು ಮುನಿರತ್ನರಿಗೆ ಟಿಕೆಟ್ ನೀಡುವಂತೆ ಮನವಿ ಮಾಡುತ್ತೇವೆ ಎಂದರು.
ಡಿಸಿ ವರ್ಗಾವಣೆ ಹಿಂದೆ ಯಾವುದೇ ರಾಜಕೀಯವಿಲ್ಲ:
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ಅವರ ವರ್ಗಾವಣೆ ಹಿಂದೆ ಯಾವುದೇ ರಾಜಕೀಯ ಒತ್ತಡವಿಲ್ಲ. ಅಧಿಕಾರಿಗಳ ವರ್ಗಾವಣೆ ಮಾಡುವುದು ಸರ್ಕಾರದ ಕರ್ತವ್ಯ. ಇದರಲ್ಲಿ ಭಾಷೆ, ಗಡಿ ತಾರತಮ್ಯ ಬೇಡ. ರೋಹಿಣಿ ಸಿಂಧೂರಿ ಅವರು ರಾಜ್ಯದ ವಿವಿಧೆಡೆ ಕೆಲಸ ಮಾಡಿದ್ದಾರೆ. ಅಧಿಕಾರಿಗಳನ್ನು ಭಾಷೆ ಆಧಾರದ ಮೇಲೆ ಗುರುತಿಸಬಾರದು ಎಂದು ಹೇಳಿದರು. ದಸರಾ ಉದ್ಘಾಟಕರ ಹೆಸರನ್ನು ಇನ್ನೆರಡು ದಿನದಲ್ಲಿ ಅಂತಿಮಗೊಳಿಸಲಾಗುವುದು. ಮೈಸೂರನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡುವುದರ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದ್ರು.