ಮೈಸೂರು: ಮೈಸೂರು ನಗರಾಭಿವೃದ್ಧಿಗೆ ನಮ್ಮ ಸರ್ಕಾರದಿಂದ ಏನಾಗಬೇಕು ಎಂಬುದನ್ನು ನೋಡಿಕೊಳ್ಳುತ್ತೇವೆ. ಮುಡಾಕ್ಕೆ ಇರುವ ಅಡೆತಡೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಈ ಬಗ್ಗೆ ಸಮಗ್ರ ವರದಿ ತಯಾರಿಸಿ ವರದಿ ಸಿದ್ಧಪಡಿಸಿದರೆ ಒನ್ ಟೈಂ ಸೆಟ್ಲಮೆಂಟ್ ಗೆ ಅವಕಾಶ ಕಲ್ಪಿಸುವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದರು.
ವಿಜಯನಗರ ಬಡಾವಣೆ ಪರಿಶೀಲನೆ ಬಳಿಕ ಮಾತನಾಡಿದ ಅವರು, ಒಂದು ವೇಳೆ ಈಗಿರುವ ಅಡೆತಡೆಗಳನ್ನು ತೆಗೆದರೆ ಬಹುತೇಕ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ಸಿಗಲಿದೆ. ಅಲ್ಲದೆ, ವಿಜಯನಗರ ಬಡಾವಣೆಯನ್ನು ಕಾರ್ಪೋರೇಶನ್ ಗೆ ಸೇರಿಸಬೇಕು ಎಂಬ ವಿಷಯದ ಬಗ್ಗೆ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ. ಒಟ್ಟಾರೆಯಾಗಿ ಮೈಸೂರಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈಗಾಗಲೇ ಇರುವ ನಿವೇಶನಗಳನ್ನು ಮಾರಾಟ ಮಾಡಿದಾಗ ಬರುವ ಹಣವನ್ನು ಮುಡಾ ವ್ಯಾಪ್ತಿಯಲ್ಲಿರುವ ಬಡಾವಣೆಗಳಿಗೆ ಖರ್ಚು ಮಾಡಿದರೆ, ಅಭಿವೃದ್ಧಿಯಾಗತ್ತದೆ. ಈ ಬಗ್ಗೆ ನಗರಾಭಿವೃದ್ಧಿ ಸಚಿವರಾದ ಬಿ. ಎ. ಬಸವರಾಜು ಅವರ ಜೊತೆಯೂ ಚರ್ಚಿಸಲಾಗಿದೆ. ಅವರ ಜೊತೆ ಇತರ ಸಮಸ್ಯೆಗಳ ಬಗ್ಗೆಯೂ 2 ಸುತ್ತಿನ ಸಭೆಗಳನ್ನೂ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ಒನ್ ಟೈಂ ಸೆಟ್ಲಮೆಂಟ್ ಗಾಗಿ ಸಮಗ್ರ ವರದಿ ಸಲ್ಲಿಸಿ ಒಪ್ಪಿಗೆ ಕೊಡಿಸುವೆ:
ಒಂದೇ ಬಾರಿ ಬಡಾವಣೆಗಳ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರ ವಿಶ್ವಾಸ ಪಡೆದು, ವರದಿ ಸಿದ್ಧಪಡಿಸಿ ಪ್ರಸ್ತಾವನೆ ಕೊಟ್ಟರೆ ಒಂದೇ ದಿನದಲ್ಲಿ ಸರ್ಕಾರದಿಂದ ಅನುಮೋದನೆ ಕೊಡಿಸುವ ಕೆಲಸವನ್ನು ನಾನು ಮಾಡುತ್ತೇನೆ. ಇದೊಂದು ರೀತಿಯಲ್ಲಿ ಒನ್ ಟೈಂ ಸೆಟ್ಲಮೆಂಟ್ ಇದ್ದಹಾಗೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಆದರೆ, ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಕೂಲಂಕಷವಾಗಿ ಅಧ್ಯಯನ ಮಾಡಿ ಸಮಸ್ಯೆಗಳಾಗದಂತೆ ಪ್ಲಾನ್ ತಯಾರಿಸಬೇಕು. ಒಮ್ಮೆ ಒಪ್ಪಿಗೆ ಪಡೆದ ಮೇಲೆ ಮತ್ತೆ ಸಮಸ್ಯೆಗಳು ಉದ್ಭವವಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ದೇವಸ್ಥಾನಗಳನ್ನು ಒಡೆಯುವುದನ್ನು ನಾವು ಒಪ್ಪಲ್ಲ. ಬೆಂಗಳೂರಿನಲ್ಲಿಯೂ ಇಂತಹದ್ದನ್ನು ನಾವು ಮಾಡಲ್ಲ. ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡೋಣ. ಬಡಾವಣೆಯವರೇ ದುಡ್ಡು ಹಾಕಿ ನಿರ್ವಹಣೆ ಮಾಡಿಕೊಂಡು ಹೋಗುತ್ತಿರುವ ದೇವಸ್ಥಾನಗಳನ್ನು ಒಡೆಯುವ ಕೆಲಸ ಆಗಬಾರದು. ಈ ಬಗ್ಗೆ ನನಗೆ ದೂರುಗಳು ಬಂದಿವೆ. ಮುಂದೆ ಹೀಗಾಗಬಾರದು ಎಂದು ಸಚಿವರಾದ ಎಸ್. ಟಿ. ಸೋಮಶೇಖರ್ ತಿಳಿಸಿದರು.
ಅಧಿಕಾರಿಗಳಿಗೆ ಸಚಿವ ಎಸ್ಟಿಎಸ್ ಸೂಚನೆ:
ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರೆ ಇಂದು ಜನಪ್ರತಿನಿಧಿಗಳಾದ ನಾವು ಇಲ್ಲಿಗೆ ಬರುವ ಅವಶ್ಯಕತೆ ಬೀಳುತ್ತಿರಲಿಲ್ಲ. ಆದರೆ, ಅವರು ನಿರ್ಲಕ್ಷ್ಯ ವಹಿಸುವ ಪರಿಣಾಮ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ. ಇನ್ನು ಮುಂದಾದರೂ ಅಚ್ಚುಕಟ್ಟಾಗಿ, ಚಲನಶೀಲವಾಗಿ ಕಾರ್ಯನಿರ್ವಹಿಸುವಂತೆ ಸಚಿವರು ಸೂಚಿಸಿದರು.