ಮೈಸೂರು: ಜಿಲ್ಲೆಯಲ್ಲಿ ಆಕ್ಸಿಜನ್ ಸೌಲಭ್ಯ ಹೊಂದಿರುವ ಬೆಡ್ಗಳ ಕೊರತೆ ಇಲ್ಲ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ರೆಮಿಡೆಸಿವಿಯರ್ ಔಷಧಿ ಕೊರತೆ ಇಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಇಂದು ಜೆ.ಎಸ್.ಎಸ್. ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಬೆಡ್ಗಳನ್ನು ಜಿಲ್ಲಾಡಳಿತಕ್ಕೆ ನೀಡುವ ಕುರಿತಂತೆ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸೋಮಶೇಖರ್, ಮೈಸೂರಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇರುವ ಬೆಡ್ ಗಳ ಕೊರತೆ ಇಲ್ಲ. ಹೊರಗಿನಿಂದ ಹೆಚ್ಚಾಗಿ ಸೋಂಕಿತರು ಮೈಸೂರಿಗೆ ಬರುತ್ತಿದ್ದು, ಕೆಲವು ಕಡೆ ಸಮಸ್ಯೆಯಾಗಿದೆ, ಅದನ್ನು ಸರಿಪಡಿಸಲಾಗುವುದು. ಜೊತೆಗೆ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮಿಡಿಸಿವಿಯರ್ ಔಷಧಿ ಲಭ್ಯವಿದ್ದು, ಸರ್ಕಾರದಿಂದ ಇನ್ನೂ ಹೆಚ್ಚಿನ ಔಷಧಗಳು ಬರುತ್ತವೆ. ಐ.ಸಿ.ಯು. ತುರ್ತು ಆಕ್ಸಿಜನ್ ಬೆಡ್ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜನತಾ ಕರ್ಪ್ಯೂ ವಿಚಾರದಲ್ಲಿ ಯಾವ ವಲಯಕ್ಕೂ ಯಾವುದೇ ಪ್ಯಾಕೇಜ್ ಬಗ್ಗೆ ಚರ್ಚೆಯಾಗಿಲ್ಲ. ಸಹಕಾರಿ ಕ್ಷೇತ್ರದ ಬ್ಯಾಂಕುಗಳ ಸಾಲ, ಬಡ್ಡಿ ಮನ್ನಾ ಇಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಬಿಗಿಯಾದ ಕ್ರಮವನ್ನು ತಜ್ಞರ ಸಲಹೆಯಂತೆ ತೆಗೆದುಕೊಂಡಿದ್ದೇವೆ, ಜನರು ಸಹಕರಿಸಬೇಕೆಂದು ಮನವಿ ಮಾಡಿದ ಸಚಿವರು, 14 ದಿನ ಜನತಾ ಕರ್ಫ್ಯೂ ಮಾಡಿದರೆ ಕೊರೊನಾ ಚೈನ್ ಲಿಂಕ್ ಕಟ್ ಆಗಲಿದೆ ಎಂದು ತಿಳಿಸಿದರು.