ಮೈಸೂರು: ಮುಖ್ಯಮಂತ್ರಿಗಳು ಐಸಿಯುನಲ್ಲಿ ಇಲ್ಲ, ಇರೋದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಂದು ಸಚಿವ ಸೋಮಶೇಖರ್ ಸಿದ್ದು ಹೇಳಿಕೆಗೆ ತಿರುಗೇಟು ನೀಡಿದರು.
ಇಂದು ದಿಢೀರ್ ಆಗಿ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ನಿಯಂತ್ರಣಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವೈದ್ಯರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಕೋವಿಡ್ ಎರಡನೇ ಅಲೆ ಈಗ ಬಹಳ ಗಂಭಿರವಾಗಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.
ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ಎಂದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಐಸಿಯುನಲ್ಲಿ ಇದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿ, ಸಿದ್ದರಾಮಯ್ಯ ಐಸಿಯುನಲ್ಲಿ ಇದ್ದಾರೆ. ಮುಖ್ಯಮಂತ್ರಿಗಳಲ್ಲ. ಮುಖ್ಯಮಂತ್ರಿಗಳು ಆಸ್ಪತ್ರೆಯಿಂದಲೇ ರಾಜ್ಯದ ಎಲ್ಲ ಪರಿಸ್ಥಿಗಳನ್ನು ಗಮನಿಸುತ್ತಿದ್ದಾರೆ. ವಿಡಿಯೋ ಸಂವಾದದ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಲಾಕ್ಡೌನ್ ಈಗ ಪರಿಹಾರ ಅಲ್ಲ. ಅದಕ್ಕೆ ಬದಲಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಕಠಿಣ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದ ಅವರು, ಕೋವಿಡ್ ಹಿನ್ನೆಲೆ ಒಕ್ಕಲಿಗರ ಸಂಘದ ಚುನಾವಣೆ ನಡೆಸದಂತೆ ಕೆಲವರು ಮನವಿ ಮಾಡಿದ್ದಾರೆ. ಈ ವಿಚಾರವನ್ನು ಹೈಕೋರ್ಟ್ ಗಮನಕ್ಕೆ ತಂದು, ಕೋರ್ಟ್ ನೀಡುವ ನಿರ್ದೇಶವನ್ನು ಪಾಲನೆ ಮಾಡಲಾಗುವುದು ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.