ಮೈಸೂರು: ನಂಜನಗೂಡು ತಾಲ್ಲೂಕು ವೈದ್ಯಾಧಿಕಾರಿ ದಿ. ಡಾ. ಎಸ್.ಆರ್. ನಾಗೇಂದ್ರ ಅವರ ಕುಟುಂಬದವರಿಗೆ ಸರ್ಕಾರದ ವತಿಯಿಂದ 50 ಲಕ್ಷ ಚೆಕ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ವಿತರಿಸಿದರು.
ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿರುವ ಮೃತ ನಾಗೇಶ್ ಕುಟುಂಬದವರಿಗೆ ಸಾಂತ್ವನ ಹೇಳಿ ಚೆಕ್ ವಿತರಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ನಿಗದಿಪಡಿಸಿದ 50 ಲಕ್ಷ ರೂ. ಚೆಕ್ ಅನ್ನು ನೀಡಲಾಗಿದೆ. ಈಗಾಗಲೇ ಪತ್ನಿಗೆ ಸಿ ದರ್ಜೆಯ ಸರ್ಕಾರಿ ನೌಕರಿ ನೀಡಲು ಸರ್ಕಾರ ಮುಂದಾಗಿದೆ. ಅವರು ಉಪನ್ಯಾಸಕ ಹುದ್ದೆ ನೀಡುವಂತೆ ಕೋರಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು.
ಡಾ. ಎಸ್.ಆರ್. ನಾಗೇಂದ್ರ ಅವರ ಸಾವಿನ ಬಗ್ಗೆ ಪ್ರಾದೇಶಿಕ ಆಯುಕ್ತರು ಮೂರು ದಿನಗಳೊಳಗೆ ವರದಿ ನೀಡಲಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ವಾರಿಯರ್ಸ್ ಇಂತಹ ಅನಾಹುತಕ್ಕೆ ಮುಂದಾಗಬಾರದು ಎಂದು ತಿಳಿಸಿದರು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆ ಬಗ್ಗೆ ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಯಾರೂ ಕೂಡ ವಿರೋಧಿಸಿಬಾರದು. ಅಣ್ಣ-ತಮ್ಮಂದಿರ ರೀತಿ ಬದುಕಬೇಕು ಎಂದರು.