ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ನಿಮಿತ್ತ ಉಪಸಮಿತಿಗಳ ರಚನೆ, ಕಾರ್ಯಕ್ರಮಗಳ ರೂಪುರೇಷೆ ಸಿದ್ಧತೆ ಕುರಿತಂತೆ ಮಂಗಳವಾರ ಅರಮನೆ ಮಂಡಳಿಯಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ, ಮಾತನಾಡಿದ ಸಚಿವರು ನಮ್ಮ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಸಾರುವ ದಸರಾ ಮಹೋತ್ಸವವನ್ನು ಜನರ ಉತ್ಸವವನ್ನಾಗಿ ಅಚ್ಚುಕಟ್ಟಾಗಿ ನೆರವೇರಿಸಬೇಕು. ಎಲ್ಲ ಉಪಸಮಿತಿಗಳು ಸಮನ್ವಯ ಸಾಧಿಸಿ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖೇನ ನಾಡಹಬ್ಬವನ್ನು ಯಶಸ್ವಿಯಾಗಿಸಬೇಕು ಎಂದು ತಿಳಿಸಿದರು.
ದೇಶ, ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಪ್ರತಿಯೊಬ್ಬರಿಗೂ ನಾಡಿನ ಪರಂಪರೆ, ಕಲಾ ವೈಶಿಷ್ಟ್ಯ, ಸಂವಿಧಾನದ ಆಶಯ, ಸರ್ಕಾರದ ಐತಿಹಾಸಿಕ ಯೋಜನೆಗಳು ತಿಳಿಸಿಕೊಡುವ ಕೆಲಸ ಮಾಡಲು ಕೂಡಲೇ ಎಲ್ಲ ಉಪಸಮಿತಿಗಳು ಕಾರ್ಯೋನ್ಮುಖರಾಗಬೇಕು. ದಸರಾ ಉತ್ಸವದಲ್ಲಿ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಿಗೆ ಅಳವಡಿಸುವ ದೀಪಾಲಾಂಕಾರದಿಂದ ಪ್ರವಾಸಿಗರಿಗೆ ಅತ್ಯತ್ತಮವಾದ ಸಂದೇಶ ನೀಡಬೇಕು. ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳು ಮತ್ತು ಮಹಾನ್ ವ್ಯಕ್ತಿಗಳ ಪ್ರತಿಕೃತಿಗಳನ್ನು ಪ್ರಮುಖ ವೃತ್ತದಲ್ಲಿ ಅಳವಡಿಸಬೇಕು ಎಂದು ಸೂಚಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಸ್ಥಳೀಯ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ, ಅವರಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸಬೇಕು. ನಾಡಿನ ಎಲ್ಲ ಕಲಾ ಪ್ರಕಾರಗಳನ್ನು ಜನರಿಗೆ ಪರಿಚಯ ಮಾಡಿಕೊಡುವ ಕಾರ್ಯಕ್ರಮ ಒಳಗೊಂಡಿರಬೇಕು. ಸಂಗೀತ, ನಾಟಕ, ನೃತ್ಯ ಇನ್ನಿತರ ಕಲಾ ಪ್ರಕಾರಗಳನ್ನು ನೋಡಿ ಕಲಾರಸಿಕರು ಆಸ್ವಾದಿಸುವಂತಹ ಕಾರ್ಯಕ್ರಮ ರೂಪಿಸಬೇಕು. ಯುವ ಜನರನ್ನು ಹೆಚ್ಚು ಆಕರ್ಷಿಸುವ ಹಾಗೂ ಅವರು ಅಧಿಕವಾಗಿ ಭಾಗವಹಿಸುವ ಯುವ ಸಂಭ್ರಮ, ಯುವ ದಸರಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಂಡು ಅಚ್ಚುಕಟ್ಟಾಗಿ ನಡೆಸಬೇಕು. ಆಹಾರ ಮೇಳದಲ್ಲಿ ಶುಚಿ ಹಾಗೂ ರುಚಿಯಿಂದ ಉತ್ತಮವಾಗಿ ಆಹಾರ ತಯಾರಿಸುವವರಿಗೆ ಪ್ರಾಮುಖ್ಯತೆ ನೀಡಿ ಮಳಿಗೆ ನೀಡಬೇಕು ಎಂದರು.
ಫಲಪುಷ್ಪ ಪ್ರದರ್ಶನವು ಪ್ರತಿಯೊಬ್ಬರನ್ನೂ ಆಕರ್ಷಿಸುವ ಕಾರ್ಯಕ್ರಮವಾಗಿದೆ. ಹಾಗಾಗಿ ಪ್ರದರ್ಶನವು ಹೆಚ್ಚಿನ ಮಟ್ಟದಲ್ಲಿ ಕಲಾತ್ಮಕತೆ ಹಾಗೂ ಸೃಜನಶೀಲತೆಯಿಂದ ಕೂಡಿರಬೇಕು. ಲಕ್ಷಾಂತರ ವಿವಿಧ ಕುಸುಮಗಳಿಂದ ಅರಳಿದ ಕಲಾಕೃತಿಗಳನ್ನು ದಸರಾಗೆ ಬರುವ ಪ್ರವಾಸಿಗರು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸುವಷ್ಟು ಸುಂದರವಾಗಿ ಮೂಡಿಬರಬೇಕು. ದಸರಾ ಸಂದರ್ಭದಲ್ಲಿ ಪ್ರಮುಖವಾಗಿ ನಗರವನ್ನು ಸ್ವಚ್ಚತೆಯಿಂದಿಡಲು ನಗರ ಪಾಲಿಕೆಯು ಹೆಚ್ಚಿನ ಶ್ರಮವಹಿಸಬೇಕು. ರಸ್ತೆ ಇಕ್ಕೆಲಗಳಲ್ಲಿ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಆ ದಿನವೇ ತ್ವರಿತವಾಗಿ ಸ್ವಚ್ಚಗೊಳಿಸಬೇಕು. ಬೆಳಗ್ಗೆ ಹಾಗೂ ರಾತ್ರಿ ಎರಡೂ ಪಾಳಿಯಲ್ಲಿ ಕೆಲಸ ನಿರ್ವಹಿಸಲು ತಂಡವನ್ನು ರಚಿಸಬೇಕು ಎಂದು ಸಲಹೆ ನೀಡಿದರು.
ಉಪ ಸಮಿತಿಯು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಮತ್ತೊಂದು ಸಭೆ ನಡೆಸಿ ವಿಸ್ತಾರವಾಗಿ ಚರ್ಚಿಸಲಾಗುವುದು. ಎಲ್ಲಾ ಅಧಿಕಾರಿಗಳು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Mysore Dussehra: ಮೈಸೂರು ದಸರಾ ಮಹೋತ್ಸವದ ಗಜಪಡೆಗೆ ಪೂಜೆ.. ಅರಮನೆಗೆ ಅದ್ಧೂರಿ ಸ್ವಾಗತ..