ಮೈಸೂರು: ಲೋಕಸಭೆ ಚುನಾವಣೆ ಬಳಿಕ ಮಹಾರಾಷ್ಟ್ರದ ರೀತಿ ರಾಜ್ಯ ಸರ್ಕಾರ ಪತನ ಆಗುತ್ತದೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಸರಿಯಿಲ್ಲ. ಈ ರೀತಿಯ ಗೊಂದಲದ ಹೇಳಿಕೆ ನೀಡಿ ಸರ್ಕಾರವನ್ನು ಅಲುಗಾಡಿಸಲು ಮುಂದಾಗುತ್ತಿದ್ದಾರೆ. ನಾವು ಗಟ್ಟಿಯಾಗಿದ್ದು, ಆ ರೀತಿ ಆಗಲು ಸಾಧ್ಯವಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಇಲ್ಲಿನ ಜಿ.ಪಂ ಕಚೇರಿ ಬಳಿ ಬ್ರಾಂಡ್ ಮೈಸೂರು ಲೋಗೋ ಅನಾವರಣಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಈಗ ಅಧಿವೇಶನ ನಡೆಯುತ್ತಿದೆ. ಈ ರೀತಿ ಗೊಂದಲದ ಹೇಳಿಕೆ ನೀಡಿ ರಾಜ್ಯ ಸರ್ಕಾರ ಅಲುಗಾಡಿಸಲು ಮುಂದಾಗುತ್ತಿದ್ದಾರೆ. ಸರ್ಕಾರ ಅಭದ್ರಗೊಳಿಸಲು ಪ್ರಯತ್ನಿಸಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟು ಹಾಕಿದಂತೆ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಬಿ ಕೆ ಹರಿಪ್ರಸಾದ್ ವಾಗ್ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಬಿ ಕೆ ಹರಿಪ್ರಸಾದ್ ಹೇಳಿರುವ ಹೇಳಿಕೆಯನ್ನು ನಾನು ನೋಡಿಲ್ಲ. ಕೆಲವೊಮ್ಮೆ ಮಾಧ್ಯಮಗಳೇ ಇಂತಹ ವಿಚಾರಗಳನ್ನು ಪ್ರಸ್ತಾಪನೆ ಮಾಡುತ್ತವೆ ಎಂದರು. ವಕೀಲರ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ಇದರಿಂದ ವಕೀಲರ ರಕ್ಷಣೆಗೆ ಮಸೂದೆ ಸಿದ್ಧ ಮಾಡಲಾಗುತ್ತಿದೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಿ ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೊಳಿಸುತ್ತೇವೆ ಎಂದು ಮಾಹಿತಿ ನೀಡಿದರು.
ಪಾರಂಪರಿಕ ಕಟ್ಟಡಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಮೈಸೂರು ಪ್ರವಾಸಿಗರ ನಗರ, ದೇಶ ವಿದೇಶದಲ್ಲೂ ಪ್ರವಾಸಿ ತಾಣವಾಗಿ ಹೆಸರಾಗಿದೆ. ಮೈಸೂರು ಬ್ರಾಂಡ್ ಹೆಸರು ಆಗಬೇಕು. ಮೈಸೂರು ಬ್ರಾಂಡ್ ಲೋಗೋವನ್ನು ಅನಾವರಣ ಮಾಡುತ್ತಿದ್ದೇವೆ. ಮೈಸೂರಿನ ಪಾರಂಪರಿಕ ಕಟ್ಟಡಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.
ಮೈಸೂರಿನಲ್ಲಿ 200ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿದ್ದು, ಅವುಗಳ ಸರ್ವೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮಾಡಲಾಗುವುದು, ಜೊತೆಗೆ ಮೈಸೂರು ನಗರ ಸೇರಿದಂತೆ ಈ ಭಾಗದ ಪ್ರವಾಸಿ ತಾಣಗಳನ್ನು ಒಳಗೊಂಡಂತೆ ಟೂರಿಸಂ ಸರ್ಕ್ಯೂಟ್ ಮಾಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಬ್ರಾಂಡ್ ಮೈಸೂರು ಲೋಗೋ ಅನಾವರಣ: ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಈ ಭಾಗದ ಪ್ರಸಿದ್ಧ ವಸ್ತುಗಳ ಜನಪ್ರಿಯತೆಗಾಗಿ ಬ್ರಾಂಡ್ ಮೈಸೂರು ಹೆಸರಿನ ಲೋಗೋ ಅನಾವರಣವನ್ನು ಸಚಿವ ಹೆಚ್ ಕೆ ಪಾಟೀಲ್ ಅನಾವರಣಗೊಳಿಸಿದರು. ಈ ಲೋಗೋದಲ್ಲಿ ನಮ್ಮ ಪರಂಪರೆ, ನಿಮ್ಮ ತಾಣ ಎಂಬ ಟ್ಯಾಗ್ ಲೈನ್ ಜೊತೆ ದಸರಾ ಆನೆ ಚಿತ್ರವೂ ಇದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಪ್ರವಾಸೋದ್ಯಮದ ಅಭಿವೃದ್ಧಿಗೆ ಈ ಲೋಗೋ ಅನಾವರಣ ಮಾಡಲಾಗಿದೆ
ಇದನ್ನೂಓದಿ:ಲೋಕಸಭೆ ಚುನಾವಣೆ ಮುಗಿದ ಬಳಿಕ ಮಹಾರಾಷ್ಟ್ರದಂತೆ ರಾಜ್ಯದಲ್ಲೂ ಆಗುತ್ತೆ: ಹೆಚ್‌ಡಿಕೆ