ಮೈಸೂರು : ಹೊರಗಿನಿಂದ ಬಿಜೆಪಿ ಪಕ್ಷಕ್ಕೆ ಬಂದ 17 ಮಂದಿ ನಮ್ಮ ಪಕ್ಷ ಕಟ್ಟಿದವರಲ್ಲ, ಕೇವಲ ಪಕ್ಷ ಅಧಿಕಾರಕ್ಕೆ ಬರಲು ಸಹಕಾರ ನೀಡಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆ ಕೊಟ್ಟಿದ್ದಾರೆ.
ಮಡಿಕೇರಿಯಿಂದ ಬೆಂಗಳೂರಿಗೆ ಹೋಗುವ ವೇಳೆ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೇರೆ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ 17 ಮಂದಿ ನಮ್ಮ ಬಿಜೆಪಿ ಪಕ್ಷವನ್ನು ಕಟ್ಟಿದವರಲ್ಲ, ಕೇವಲ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಸಹಕಾರ ನೀಡಿದರಷ್ಟೇ.. ಇವರು ಬರುವ ಮುನ್ನ ನಮ್ಮ ಪಕ್ಷದಲ್ಲಿ 105 ಮಂದಿ ಶಾಸಕರು ಇದ್ದರು ಎಂದು ನೆನಪಿಸಿಕೊಳ್ಳಬೇಕು ಎಂದರು.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೊರಗಿನಿಂದ ಬಂದವರಿಗೆ ಸಚಿವ ಸ್ಥಾನ ಸಿಗುತ್ತದ್ದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೇರೆ ಪಕ್ಷದಿಂದ ಬಂದವರಿಗೆ ಕೊಡುವಂತಹದ್ದನ್ನು ಈಗಾಗಲೇ ಕೊಟ್ಟಿದ್ದೇವೆ, ನಮ್ಮ ಪಕ್ಷದಲ್ಲಿ ಹಿಂದೆ ಇದ್ದವರಿಗೂ ಕೊಡ ಬೇಕಲ್ವಾ ಎಂದರು. ಬಿಜೆಪಿಯಿಂದ 105 ಮಂದಿ ಗೆದ್ದಿದ್ದರು ಎಂದು ಯಾರು ಲೆಕ್ಕ ಮಾಡುವುದಿಲ್ಲ, ಬೇರೆ ಪಕ್ಷದಿಂದ 17 ಮಂದಿಯೇ ದೊಡ್ಡದಾಗಿ ಕಾಣಿಸುತ್ತಾರೆ.
ನಮ್ಮ ಎಲ್ಲಾ ಶಾಸಕರು ಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ. ಆದರೆ, ಯಾರಾಗಬೇಕು ಎಂಬುದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದರು.