ಮೈಸೂರು : ಕಾಂಗ್ರೆಸ್ನಿಂದ ವಲಸೆ ಬಂದ ಶಾಸಕರಿಂದ ಸರ್ಕಾರ ರಚನೆ ಮಾಡಿ ಈಗ ಈಶ್ವರಪ್ಪನವರು ಈ ರೀತಿ ಮಾತನಾಡಿದರೆ ಹೇಗೆ? ಎಂದು ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಇಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡು ಇಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಬಂದ ಶಾಸಕರಿಂದ ಬಿಜೆಪಿ ಸರ್ಕಾರ ರಚನೆ ಮಾಡಿ, 40 ರಿಂದ 50 ಪರ್ಸೆಂಟ್ ಕಮಿಷನ್ ಪಡೆದು, ಈ ರೀತಿ ಮಾತನಾಡಿದರೆ ನಿಮ್ಮನ್ನು ಯಾರು ನಂಬುತ್ತಾರೆ ಎಂದು ಟೀಕಿಸಿದರು.
ಆಕ್ಸಿಜನ್ ದುರಂತ ಶೀಘ್ರವೇ ಮರುತನಿಖೆ : ಚಾಮರಾಜನಗರ ಆಕ್ಸಿಜನ್ ದುರಂತದ ಮರುತನಿಖೆಗೆ ಒಪ್ಪಿಗೆ ಕೊಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೆವು. ಸರ್ಕಾರ ಯಾವ ಆಧಾರದ ಮೇಲೆ ತನಿಖೆ ಮಾಡಬೇಕು ಎಂಬ ಚಾರ್ಜ್ ಪ್ರೇಮ್ ಮಾಡಿಕೊಡಿ ಎಂದು ನಮಗೆ ಮತ್ತೆ ಪತ್ರ ಬರೆದಿದೆ. ಈಗ ನಾವು ಮರುತನಿಖೆ ಆಗಬೇಕಿರುವ ಅಂಶಗಳ ಬಗ್ಗೆ ಶೀಘ್ರವೇ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಸರ್ಕಾರದಿಂದ ಈ ಬಗ್ಗೆ ತೀರ್ಮಾನ ಬಂದ ನಂತರ ಕಾಲಮಿತಿಯೊಳಗೆ ಮರುತನಿಖೆ ನಡೆಸಲು ಉದ್ದೇಶಿಸಿರುವುದಾಗಿ ಸಚಿವರು ತಿಳಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಹೇಳುವುದು ಜಾತ್ಯತೀತವಾದ, ಮಾಡುವುದು ಹಿಂದೂ ವಿರೋಧಿ : ಮಾಜಿ ಸಚಿವ ಈಶ್ವರಪ್ಪ
ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ಕೆಲಸಕ್ಕೆ ನಿರ್ಬಂಧ ವಿಚಾರ: ಆರೋಗ್ಯ ಇಲಾಖೆಯಲ್ಲಿ ಇರುವ ಅರೆಕಾಲಿಕ ವೈದ್ಯರು ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ಕೆಲಸ ಮಾಡುವುದಕ್ಕೆ ನಿರ್ಬಂಧ ಹೇರಲು ಚಿಂತನೆ ನಡೆಸಲಾಗುತ್ತಿದೆ. ಈ ಹಿಂದೆ ವೈದ್ಯರ ಕೊರತೆ ಇದ್ದ ಕಾರಣ ಎರಡು ಕಡೆ ಕೆಲಸ ಮಾಡಲು ಅವಕಾಶ ಕೊಡಲಾಗಿತ್ತು. ಈಗ ಅಂತಹ ಸಮಸ್ಯೆಗಳಿಲ್ಲ. ಸರ್ಕಾರದ ವ್ಯಾಪ್ತಿಯಲ್ಲಿ ಮಾತ್ರ ಅರೆಕಾಲಿಕ ವೈದ್ಯರು ಕೆಲಸ ಮಾಡಲು ಆದೇಶ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು.
ಸಚಿವರನ್ನು ಸ್ವಾಗತಿಸಿದ ಪ್ರತಾಪ್ ಸಿಂಹ: ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಅರೆಕಾಲಿಕ ವೈದ್ಯ ಸಿಬ್ಬಂದಿ ಕೊರತೆ ಇದೆ. ಇದರ ಜೊತೆಗೆ ಸ್ಪತ್ರೆಯಲ್ಲಿ ಇರುವ ಇತರ ಕುಂದು-ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು. ಸಚಿವರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ದಿನೇಶ್ ಗುಂಡೂರಾವ್ ಅವರನ್ನು ಸರ್ಕಾರಿ ಅತಿಥಿ ಗೃಹದಲ್ಲಿ ಸಂಸದ ಪ್ರತಾಪ್ ಸಿಂಹ ಹೂಗುಚ್ಚ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ : ಬಿಜೆಪಿಯಲ್ಲಿ ಅಶಿಸ್ತಿಗೆ ವಲಸಿಗರೇ ಕಾರಣ; ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ : ಕೆ.ಎಸ್.ಈಶ್ವರಪ್ಪ