ಮೈಸೂರು : ಕಟ್ಟಡ ಕಾಮಗಾರಿ ಕೆಲಸಕ್ಕೆ ಬಂದಿದ್ದ ಹೊರ ರಾಜ್ಯದ ಕಾರ್ಮಿಕರು ಲಾಕ್ಡೌನ್ಗೆ ಸಿಲುಕಿದ್ದು, ತಮ್ಮನ್ನು ತಮ್ಮ ತವರಿಗೆ ಕಳುಹಿಸುವಂತೆ ಲಗೇಜ್ ಸಮೇತ ತಹಶೀಲ್ದಾರ್ ಕಚೇರಿಗೆ ಬಂದ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕು ಕೊರೊನಾ ಹಾಟ್ ಸ್ಪಾಟ್ ಆಗಿದೆ. ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳು ಬಹುತೇಕ ಬಂದ್ ಆಗಿವೆ. ಮಲ್ಲುಪುರ ಬಳಿ ಇರುವ ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಯ ಒಳಗೆ ಡಿಸ್ಲೆರಿ ಕಟ್ಟಡದ ಕಾಮಗಾರಿಗೆ ಬಂದಿದ್ದ ಹೊರ ರಾಜ್ಯದ ಸುಮಾರು 350 ಕಾರ್ಮಿಕರು ಲಾಕ್ಡೌನ್ಗೆ ಸಿಲುಕಿ, ತಿಂಗಳ ಸಂಬಳ ಇಲ್ಲದೇ ಹಾಗೂ ಒಂದು ಹೊತ್ತಿನ ಊಟವೂ ಇಲ್ಲದೆ ದಿಕ್ಕು ಕಾಣದೆ ತಮ್ಮ ಲೆಗೇಜ್ ಸಮೇತ ತಹಶೀಲ್ದಾರ್ ಕಚೇರಿಗೆ ಬಂದಿದ್ದರು.
ಈ ವೇಳೆ ತಹಶೀಲ್ದಾರ್ ಎಲ್ಲರಿಗೂ ಉಳಿಯುವ ವ್ಯವಸ್ಥೆ ಮಾಡಲಾಗುತ್ತೆ. ಎಲ್ಲರನ್ನೂ ತಮ್ಮ ತಮ್ಮ ಊರುಗಳಿಗೆ ಕಳುಹಿಸುವ ಭರವಸೆ ನೀಡಿದ ನಂತರ, ಕಾರ್ಮಿಕರು ಪುನಃ ತಾವು ಕೆಲಸ ಮಾಡುತ್ತಿರುವ ಕಾರ್ಖಾನೆಗೆ ತೆರಳಿದರು. ಶೀಘ್ರವೇ ಅವರನ್ನು ತಮ್ಮ ತಮ್ಮ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದೆಂದು ತಹಶೀಲ್ದಾರ್ ತಿಳಿಸಿದರು.