ಮೈಸೂರು: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ ಅಮರ್‌ನಾಥ್ ಅವರಿಗೆ ಜನಪ್ರತಿನಿಧಿಗಳು ನಿಂದನೆ ಮಾಡಿರುವುದನ್ನು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ತೀವ್ರವಾಗಿ ಖಂಡಿಸಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಆವರಣದಲ್ಲಿರುವ ವೈದ್ಯರ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ದೇವಿ ಆನಂದ್ ಮಾತನಾಡಿ, ಮೇ 29 ರಂದು ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ ಅಮರನಾಥ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ವೈದ್ಯಾಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಔಷಧಿ ವಿತರಣೆ ಅವ್ಯವಸ್ಥೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳದ್ದು ಯಾವುದೇ ತಪ್ಪಿಲ್ಲ. ಸರ್ಕಾರ ಅನುದಾನ ನೀಡದಿದ್ದರೆ ಔಷಧಿ ಖರೀದಿಸುವುದು ಹೇಗೆ? ಇದರಲ್ಲಿ ಡಿಹೆಚ್ಒ ಅವರ ತಪ್ಪು ಮಾಡಿದ್ದರೆ ಕಾನೂನಾತ್ಮಕ ಕ್ರಮ ಜರುಗಿಸಿ. ಆದರೆ, ಇತರೆ ಅಧಿಕಾರಿಗಳ ಎದುರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಖಂಡನೀಯ ಎಂದರು.
ಇದನ್ನೂ ಓದಿ : ಮೈಸೂರು ಪಾಲಿಕೆಗೆ 10 ಲಕ್ಷ ರೂ. ಮೌಲ್ಯದ ವೈದ್ಯಕೀಯ ಕಿಟ್ ನೀಡಿದ ಇನ್ಫೋಸಿಸ್
ಪಿರಿಯಾಪಟ್ಟಣ ತಾಲೂಕು ಆರೋಗ್ಯಾಧಿಕಾರಿ ಡಾ. ಶರತ್ ಬಾಬು ಮಾತನಾಡಿ, ವೈದ್ಯರಿಗೆ ನಿಂದನೆ ಮಾಡುವಂತ ಘಟನೆಗಳು ಮರುಕಳಿಸಿದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.