ಮೈಸೂರು: ಹುಣಸೂರು ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ನಾಮಪತ್ರ ಸಲ್ಲಿಕೆಯಲ್ಲಿ 32.5 ಕೋಟಿ ಆದಾಯವನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
15 ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಅದರಲ್ಲಿ ಹುಣಸೂರು ಉಪಚುನಾವಣೆಗೆ ಕಾಂಗ್ರೆಸ್ನಿಂದ ಹೆಚ್.ಪಿ.ಮಂಜುನಾಥ್ ಅಭ್ಯರ್ಥಿಯಾಗಿದ್ದು, ನಾಮಪತ್ರ ಸಲ್ಲಿಕೆ ವೇಳೆ 32.5 ಕೋಟಿ ಆದಾಯವನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ.
ಅದರಲ್ಲಿ 26 ಕೋಟಿ ಸ್ಥಿರಾಸ್ತಿ, 5.50 ಕೋಟಿ ಚರಾಸ್ತಿಯ ಜೊತೆಗೆ 1 ಕೋಟಿ ಮೌಲ್ಯದ ಚಿನ್ನಾಭರಣ ಸೇರಿ ಕುಟುಂಬದ ಒಟ್ಟು ಆಸ್ತಿ 32.50 ಕೋಟಿ ರೂಪಾಯಿ ಇದೆ. ಇನ್ನು 3.75 ಕೋಟಿ ರೂಪಾಯಿ ಸಾಲ ಘೋಷಿಸಿದ್ದಾರೆ. ಬಿ.ಎ.ಪದವೀಧರ ಪತ್ನಿ ಸುಪ್ರಿಯಾ ಮಂಜುನಾಥ್, ಪುತ್ರ ಹೆಚ್.ಎಂ. ಪವನ್, ಹೆಚ್.ಎಂ.ಲಕ್ಷ್ಮೀ ಮಾನಸ ಹೆಸರಿನಲ್ಲಿ ಆಸ್ತಿ ವ್ಯವಹಾರ ನಡೆಸುತ್ತಿರುವುದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ.
17.72 ಲಕ್ಷ ರೂ ಠೇವಣಿ: ಮಂಜುನಾಥ್ ಹಲವು ಬ್ಯಾಂಕ್ ಗಳಲ್ಲಿ12.06 ಲಕ್ಷ, ಪತ್ನಿ ಹೆಸರಿನಲ್ಲಿ 46.79 ಲಕ್ಷ, ಪುತ್ರನ ಹೆಸರಲ್ಲಿ 23.61 ಲಕ್ಷ, ಮಗಳು ಲಕ್ಷ್ಮೀ ಮಾನಸ ಹೆಸರಿನಲ್ಲಿ 8.8 ಲಕ್ಷ ರೂಪಾಯಿ ಹಣ ಠೇವಣಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಕುಟುಂಬಸ್ಥರಿಗೆ ಸಾಲ: ಮಂಜುನಾಥ್ ತಂದೆಗೆ 15 ಲಕ್ಷ, ಪತ್ನಿ 12.25 ಲಕ್ಷ, ಸಹೋದರ ಶ್ರೀನಾಥ್ ಗೆ 1.5ಲಕ್ಷ, ಚಿಕ್ಕಪ್ಪ ಶಶಿಧರ್ ಗೆ 14 ಲಕ್ಷ ಹಾಗೂ ಟ್ಯಾಲೆಂಟ್ ಸಂಸ್ಥೆಗೆ 34.25 ಲಕ್ಷ, ಪವನ್ ಜಲ್ ಕಂಪನಿಗೆ 68 ಲಕ್ಷ ಮತ್ತು ವಿಘ್ನೇಶ್ ಟ್ರೇಡರ್ಸ್ ಗೆ 30 ಲಕ್ಷ ಜೊತೆಗೆ ತನ್ನ ಪತ್ನಿ, ಮಗ, ಮಗಳಿಗೆ 8 ಲಕ್ಷ ರೂಪಾಯಿ ಸಾಲ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.