ಮೈಸೂರು: ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ನಗರದ ಟೌನ್‌ಹಾಲ್‌ನಲ್ಲಿ ಇಂದು ಮಹಿಷ ಉತ್ಸವ ಸಮಿತಿಯವರು ಮಹಿಷ ದಸರಾ ಆಚರಿಸಿದರು. ಈ ಸಂದರ್ಭದಲ್ಲಿ ಹಲವು ಮುಖಂಡರು ಮಾತನಾಡಿ, ಮಹಿಷಾಸುರನ ಇತಿಹಾಸ ಹಾಗೂ ಮಹಿಷ ದಸರಾಗೆ ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದರು.
ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ನಗರದ ಟೌನ್‌ಹಾಲ್‌ನಲ್ಲಿ ಉತ್ಸವ ಸಮಿತಿ ಮಹಿಷ ದಸರಾ ಆಚರಿಸಿತು. ಟೌನ್‌ಹಾಲ್ ಮುಂಭಾಗ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಈ ವೇದಿಕೆಯಲ್ಲಿ ಮಹಿಷನ ಪ್ರತಿಮೆ ಇಟ್ಟು, ಪುಷ್ಪಾರ್ಚನೆ ಮಾಡಿದರು. ಜ್ಞಾನ ಪ್ರಕಾಶ ಸ್ವಾಮೀಜಿ, ಇತಿಹಾಸ ತಜ್ಞ ಪ್ರೊ.ಚಿಕ್ಕರಂಗೇಗೌಡ, ಕೆ.ಎಸ್.ಭಗವಾನ್ ಮಹಿಷನ ಇತಿಹಾಸದ ಬಗ್ಗೆ ಮಾತನಾಡಿದರು.
ಜ್ಞಾನ ಪ್ರಕಾಶ ಸ್ವಾಮೀಜಿ, "ಇದೊಂದು ಐತಿಹಾಸಿಕ ಕ್ಷಣ. ಮಹಿಷ ಮಂಡಲವನ್ನು ಇಡೀ ರಾಜ್ಯ ಮತ್ತು ದೇಶ ತಿರುಗಿ ನೋಡುತ್ತಿದೆ. ಇದಕ್ಕೆ ಸಂಸದರಿಗೆ ಧನ್ಯವಾದ ಹೇಳುತ್ತೇನೆ. ಮಹಿಷ ಮಂಡಲ ಎಲ್ಲರಿಗೂ ತಿಳಿಯಿತು. ಇತಿಹಾಸ ಗೊತ್ತಿರದವರು ಮಹಿಷ ದೇವರಲ್ಲ ಎನ್ನುತ್ತಾರೆ" ಎಂದರು.
"ನಾವು ಇತಿಹಾಸ ಗೊತ್ತು ಮಾಡಬೇಕಾಗಿದೆ. ಇದಕ್ಕಾಗಿ ಸರ್ಕಾರ ಮಹಿಷ ಉತ್ಸವಕ್ಕೆ ಅವಕಾಶ ನೀಡಿದೆ. ನಮಗೆ ಪೆನ್ನಿನ ಸಂಸ್ಕೃತಿ ಬೇಕು, ಬಂದೂಕಿನ ಸಂಸ್ಕೃತಿ ಬೇಡ. ಮನುವಾದಿಗಳ ಹಬ್ಬ ಬೇಡ. ಅದಕ್ಕಾಗಿ ಮಹಿಷ ಉತ್ಸವ ಮಾಡುತ್ತಿದ್ದೇವೆ" ಎಂದು ತಿಳಿಸಿದರು.
ಬ್ರಾಹ್ಮಣ, ಒಕ್ಕಲಿಗ ಜಾತಿ ವಿರುದ್ಧ ವಾಗ್ದಾಳಿ: ಕೆ.ಎಸ್.ಭಗವಾನ್ ಮಾತನಾಡಿ, "ಬುದ್ಧನನ್ನು ಕಂಡರೆ ಬ್ರಾಹ್ಮಣರಿಗೆ ಕೋಪ. ಅದಕ್ಕಾಗಿ ಬುದ್ದನಿಗೆ ಜ್ಞಾನೋದಯವಾದ ಅರಳಿ ಮರದ ಕೆಳಗೆ ಬುದ್ದನ ಮೇಲಿನ ಕೋಪವನ್ನು ತೆಗೆದು ಅರಳಿ ಮರದ ಚಕ್ಕೆಯನ್ನು ಹೋಮಕ್ಕೆ ಹಾಕುತ್ತಾರೆ. ಬ್ರಾಹ್ಮಣರ ಸಂಪ್ರದಾಯಗಳು ಗೊಡ್ಡು ಸಂಪ್ರದಾಯಗಳು. ಸಾವಿರಾರು ವರ್ಷಗಳಿಂದ ಇವರು ಬೇರೆಯವರಿಗೆ ಸಂಸ್ಕೃತ ಕಲಿಸಿಲ್ಲ" ಎಂದರು. "ಒಕ್ಕಲಿಗರು ಸಂಸ್ಕೃತಿ ಹೀನರೆಂದು ಕುವೆಂಪು ಅವರೇ ಹೇಳಿದ್ದಾರೆ" ಎಂದರು.
ಇದನ್ನೂಓದಿ: ಕಿತ್ತೂರು ಚೆನ್ನಮ್ಮ, ಟಿಪ್ಪು ಸುಲ್ತಾನ್ ಸ್ವಾಭಿಮಾನದ ಹೋರಾಟ ನಮ್ಮೆಲ್ಲರಿಗೆ ಸ್ಫೂರ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ