ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಜನಸಾಗರದ ಕೂಗಾಟ, ಕಲಾ ತಂಡಗಳ ಅಬ್ಬರದ ನಡುವೆ ಮಹೇಂದ್ರ ಗಾಂಭೀರ್ಯವಾಗಿ ಹೆಜ್ಜೆ ಹಾಕಿರುವುದು ನನ್ನ ಜೀವನದಲ್ಲಿ ಮರೆಯಾಗದ ಕ್ಷಣವೆಂದು ಮಾವುತ ರಾಜಣ್ಣ ಹೇಳಿದರು.
ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಕೂಡ ಅದೃಷ್ಟ ಬೇಕು. ಆ ಅದೃಷ್ಟ ನನಗೆ ಮಹೇಂದ್ರನಿಂದ ಒದಗಿ ಬಂತು ಎನ್ನುತ್ತ ರಾಜಣ್ಣ ಭಾವುಕರಾದರು. ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗುವ ಮುನ್ನ ನಮ್ಮೂರಿನ ದೇವರಾದ ಗಣಗೂರುಸ್ವಾಮಿ ಹಾಗೂ ಚಾಮುಂಡೇಶ್ವರಿಯನ್ನು ಭಕ್ತಿಯಿಂದ ನೆನೆದು ಹೊರಟೆ. ದೇವರ ಕೃಪೆಯಿಂದ ಮಹೇಂದ್ರ ಗಂಭೀರವಾಗಿ ನಡೆದ ಎಂದರು.
ತಿತಿಮತಿ ಆನೆ ಶಿಬಿರದಿಂದ ದಸರಾ ಮಹೋತ್ಸವಕ್ಕೆ ಮಹೇಂದ್ರ (39) ಆನೆಯನ್ನು ಆಯ್ಕೆ ಮಾಡಿದ್ದ ವಿಷಯ ಕೇಳಿ ಸಂತಸಗೊಂಡಿದ್ದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಅಷ್ಟೊಂದು ಜನರ ಮಧ್ಯೆ ಹೆಜ್ಜೆ ಹಾಕಿರುವುದನ್ನ ನೆನಪಿಸಿಕೊಂಡರೆ ರೋಮಾಂಚಕವಾಗುತ್ತಿದೆ. ನಾನು ಕೂಡ ಮೊದಲ ಬಾರಿಗೆ, ಆನೆ ಮೇಲೆ ಕುಳಿತು ಅರಮನೆಯಿಂದ ಬನ್ನಿಮಂಟಪದವರೆಗೆ ಲಕ್ಷಾಂತರ ಜನರ ನಡುವೆ ಸಾಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ಅರಮನೆ ಆವರಣದಿಂದ ಜಂಬೂಸವಾರಿ ಮೆರವಣಿಗೆಯಲ್ಲಿ ಮಹೇಂದ್ರ ಜೊತೆ ಸಾಗಲಿದ್ದೇನೆ ಎಂದು ಅರಣ್ಯಾಧಿಕಾರಿಗಳು ಹೇಳಿದಾಗ ನಾನು ತುಂಬಾ ಖುಷಿಪಟ್ಟೆ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಸಾಗುವಾಗ ಕೆಆರ್ ವೃತ್ತ ಹಾಗೂ ಬನ್ನಿಮಂಟಪದ ತಿರುವಿನಲ್ಲಿ ಸ್ಪಲ್ಪ ಹೆದರಿದ. ಆ ವೇಳೆಯಲ್ಲಿ ಮಹೇಂದ್ರನಿಗೆ ಮೈದಡವಿ ಧೈರ್ಯ ಹೇಳಿ ಮುಂದೆ ಸಾಗುವಂತೆ ಮಾಡಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಸಾಗಿ ಬಂದಿರುವುದರಿಂದ ನಾವು ಊರಿಗೆ ವಾಪಸ್ ಹೋದ ಬಳಿಕ ನಮ್ಮೂರಿನ ದೇವರಾದ ಗಣಗೂರುಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮಹೇಂದ್ರನಿಗೆ ವಿಶೇಷ ಪೂಜೆ ಮಾಡಿಸುತ್ತೇವೆ ಎಂದು ಮಾವುತ ರಾಜಣ್ಣ ಹೇಳಿದರು.
ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿದ ಜಂಬೂ ಸವಾರಿ: ಬನ್ನಿಮಂಟಪದ ಪಂಜಿನ ಕವಾಯತಿನಿಂದ ಕಾರ್ಯಕ್ರಮಕ್ಕೆ ತೆರೆ