ಮೈಸೂರು: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮೈಸೂರಿನಾದ್ಯಂತ ಇರುವ ಶಿವ, ಮಹದೇಶ್ವರ, ನಂಜುಂಡೇಶ್ವರ, ಅರಮನೆ ದೇವಾಲಯಗಳು ಸೇರಿದಂತೆ ಅನೇಕ ದೇವಾಲಯಗಳಿಗೆ ಭಕ್ತಾದಿಗಳ ದಂಡು ಹರಿದು ಬಂದಿತ್ತು. ನಂಜನಗೂಡಿನ ಐತಿಹಾಸಿಕ ನಂಜುಂಡೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲ್ಲೇ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ಅಲ್ಲದೇ, ಮುಡಿಕಟ್ಟೆ, ಕಪಿಲಾ ನದಿ ಸ್ನಾನಘಟದಲ್ಲಿಯೂ ಭಕ್ತರು ತುಂಬಿ ತುಳುಕುತ್ತಿದ್ದ ದೃಶ್ಯ ಕಂಡುಬಂದಿತು.
ನಂಜುಂಡೇಶ್ವರ ದೇವಾಲಯದಲ್ಲಿ ಎರಡು ವರ್ಷಗಳ ಬಳಿಕ ಮಹಾಶಿವರಾತ್ರಿ ಜಾಗರಣೆ ನಡೆಯುತ್ತಿರುವುದರಿಂದ ದೇವಸ್ಥಾನ ಮುಂಭಾಗ ಶನಿವಾರ ಸಂಜೆಯಿಂದ ಭಾನುವಾರ ಮುಂಜಾನೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ ವೇಳೆ ನಡೆಯಲಿರುವ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇನ್ನು ನಂಜನಗೂಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನುಗ್ಗಿಸಿ ದೇವಾಲಯಕ್ಕೆ ಬರುತ್ತಾರೆಂಬ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಸಣ್ಣ ಸಣ್ಣ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ, ದೇವಸ್ಥಾನಕ್ಕೆ ಸುತ್ತಿಕೊಂಡು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಪಾರ್ಕಿಂಗ್ ವ್ಯವಸ್ಥೆಯನ್ನು ಸುಸುಜ್ಜಿತವಾಗಿ ಮಾಡಲಾಗಿದೆ.
ಇದನ್ನೂ ಓದಿ: ವಿಶ್ವ ಪ್ರಸಿದ್ಧ ಮುರುಡೇಶ್ವರಕ್ಕೆ ಹರಿದು ಬಂದ ಭಕ್ತ ಸಾಗರ - ವಿಡಿಯೋ
ತ್ರಿನೇಶ್ವರ ನೋಡಲು ಭಕ್ತರ ದಂಡು: ಅರಮನೆಯ ಆವರಣದಲ್ಲಿರುವ ಶ್ರೀ ತ್ರಿನೇಶ್ವರ ದೇವರಿಗೆ ಯದುವಂಶಸ್ಥರಾದ ಯದುವೀರ್ ಹಾಗೂ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್ ಅವರು, ನಾಡಿನ ಜನತೆಗೆ ಶಿವರಾತ್ರಿಯ ಶುಭಾಶಯಗಳು. ಎಲ್ಲರಿಗೂ ಶುಭವಾಗಲಿ. ಪ್ರತಿ ವರ್ಷವೂ ತ್ರಿಣೇಶ್ವರ ದೇವರಿಗೆ ಪೂಜೆ ಸಲ್ಲಿಸುತ್ತೇವೆ. ಶ್ರೀರಂಗಪಟ್ಟಣದಲ್ಲಿ ರಾಜರು ಇದ್ದಾಗಿನಿಂದಲೂ ಇಲ್ಲಿ ಪೂಜೆ ಇದೆ ಎಂದರು.
ಪುರಾತನ ದೇವಾಲಯವಿದು, ನಮ್ಮ ಮನೆತನದಿಂದ ಪ್ರತಿ ಬಾರಿಯೂ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತೇವೆ. ಎಲ್ಲಾ ರಾಜರು ದೇವಾಲಯಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ಅದರಂತೆ ಹರಿಕೆ ಇದ್ದಿದ್ದರಿಂದ ಜಯಚಾಮರಾಜೇಂದ್ರ ಒಡೆಯರು ಚಿನ್ನದ ಕೊಳಗ ಕೊಟ್ಟಿದ್ದಾರೆ. ಎಲ್ಲರಂತೆ ನಮ್ಮ ಮನೆಯಲ್ಲೂ ಹಬ್ಬದ ಆಚರಣೆ ಮಾಡಲಾಗುವುದು. ನಾವು ಎಲ್ಲರಂತೆ ದೇವರಿಗೆ ಪೂಜೆ ಸಲ್ಲಿಸುತ್ತೇವೆ. ನಂತರ ಮನೆಯಲ್ಲಿ ಹಬ್ಬದ ಊಟ ಮಾಡುತ್ತೇವೆ ಎಂದು ಹೇಳಿದರು. ಈ ವೇಳೆ ಯದುವೀರ್ ಅವರ ಪತ್ನಿ ತ್ರಿಷಿಕಾ ಕುಮಾರಿ, ಪುತ್ರ ಆದ್ಯವೀರ್ ಕೂಡ ದೇವರ ದರ್ಶನ ಪಡೆದರು. ಯದುವೀರ್ ಕುಟುಂಬಸ್ಥರನ್ನು ನೋಡಲು ಜನ ಮುಗಿಬಿದ್ದ ದೃಶ್ಯ ಕಂಡುಬಂದಿತು.
ಇದನ್ನೂ ಓದಿ: ಮೈಸೂರಿನಲ್ಲಿ ಮಹಾಶಿವರಾತ್ರಿ ಸಂಭ್ರಮ: ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಧರಿಸಿ ವಿಶೇಷ ಪೂಜೆ
ಇಂದು ಮೈಸೂರಿನ ನಜರ್ಬಾದ್ನಲ್ಲಿರುವ ಮಲೆಮಹದೇಶ್ವರ ದೇವಸ್ಥಾನ, ಅಗ್ರಹಾರದಲ್ಲಿರುವ ರಾಜಮನೆತನದ ಕಾಶಿ ವಿಶ್ವನಾಥ, ರಾಮಾನುಜ ರಸ್ತೆಯಲ್ಲಿರುವ ಕಾಮಕಾಮೇಶ್ವರಿ ದೇವಾಲಯ, ಶ್ರೀರಾಂದಲ್ಲಿರುವ ಶಿವನ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟು, ದೇವರ ಕೃಪೆಗೆ ಪಾತ್ರರಾದರು.
ಬಿಗಿ ಭದ್ರತೆ: ತ್ರಿನೇಶ್ವರ ಹಾಗೂ ನಂಜುಂಡೇಶ್ವರನ ದರ್ಶನ ಪಡೆಯಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಹಾಗೂ ಅರಮನೆಯ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.