ಮೈಸೂರು: "ಡಿ.ಕೆ.ಶಿವಕುಮಾರ್ ಒಬ್ಬ ಸಕ್ಸಸ್ ಫುಲ್ ಬ್ಯುಸಿನೆಸ್ ಮ್ಯಾನ್. ಅವರು ತಮ್ಮ ಎಲ್ಲ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. ಆದರೆ ಅವರ ಮೇಲೆ ಆರೋಪ ಮಾಡುವ ರಮೇಶ್ ಜಾರಕಿಹೊಳಿ ಒಬ್ಬ ಇಂಟರ್ ನ್ಯಾಷನಲ್ ವಂಚಕ, ಆತನ ನಿಜವಾದ ಹೆಸರನ್ನೇ ವಂಚನೆ ಮಾಡಿದ್ದಾನೆ" ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.
"ರಮೇಶ್ ಜಾರಕಿಹೊಳಿ ತಮ್ಮ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮೇಲೆ ಹಿಟ್ ಅಂಡ್ ರನ್ ತರಹದ ಆರೋಪ ಮಾಡಿದ್ದಾರೆ. ಈತನೇ ಇಂಟರ್ ನ್ಯಾಷನಲ್ ವಂಚಕ. ತನ್ನ ಶಾಲಾ ದಾಖಲಾತಿಯಲ್ಲಿ ಈತನ ಹೆಸರು ರಾಮಪ್ಪ ಲಕ್ಕಪ್ಪ ಜಾರಕಿಹೊಳಿ ಎಂದಿದೆ. ಆದರೆ ಕಾನೂನು ಬಾಹಿರವಾಗಿ ತನ್ನ ಹೆಸರನ್ನು ರಮೇಶ್ ಜಾರಕಿಹೊಳಿ ಎಂದು ಬದಲಾಯಿಸಿಕೊಂಡಿರುವ ಚಾಲಾಕಿ" ಎಂದು ವಾಗ್ದಾಳಿ ನಡೆಸಿದರು.
"ಈತ ಗೋಕಾಕ್ ಅನ್ನು ರಿಪಬ್ಲಿಕ್ ಆಫ್ ಗೋಕಾಕ್ ಮಾಡಿಕೊಂಡಿದ್ದು, ತನ್ನ ವಿರುದ್ಧ ಕೆಲಸ ಮಾಡಿದವರ ವಿರುದ್ಧ 300ಕ್ಕೂ ಹೆಚ್ಚು ಪೊಲೀಸ್ ಕೇಸ್ಗಳನ್ನು ಗೋಕಾಕ್ ಠಾಣೆಯಲ್ಲಿ ಹಾಕಿಸಿದ್ದಾನೆ. 1988 ರಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಹಿಂಗಳೆ ಎಂಬುವವರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಈತ ಸೌಭಾಗ್ಯ ಶುಗರ್ ಕಾರ್ಖಾನೆ ಹೆಸರಿನಲ್ಲಿ 9 ಬ್ಯಾಂಕ್‌ಗಳಿಂದ 860 ಕೋಟಿ ರೂ ಹಣ ಪಡೆದು ಫ್ಯಾಕ್ಟರಿ ದಿವಾಳಿಯಾಗಿದೆ ಎಂದು ತೋರಿಸಿದ್ದಾನೆ. ಆದರೂ ಬೇನಾಮಿ ಹೆಸರಿನಲ್ಲಿ ಬೆಂಗಳೂರು, ಮುಂಬೈ ಎಲ್ಲಾ ಕಡೆ ಆಸ್ತಿ ಮಾಡಿದ್ದಾನೆ."
"ಈಗ ನಾಲ್ಕು ಕೋಟಿ ಕೊಟ್ಟು ಕಾರ್ ಖರೀದಿಸಿದ್ದಾನೆ. ರಮೇಶ್ ಜಾರಕಿಹೊಳಿ ಡಿ.ಕೆ.ಶಿವಕುಮಾರ್ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ಅದನ್ನು ಬಿಟ್ಟು ಹಿಟ್ ಅಂಡ್ ರನ್ ರೀತಿಯಲ್ಲಿ ಆರೋಪ ಮಾಡಬಾರದು. ಮುಂದಿನ ದಿನಗಳಲ್ಲಿ ಗೋಕಾಕ್ ವಂಚಕನ ದಾಖಲೆಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡುತ್ತದೆ" ಎಂದು ಲಕ್ಷ್ಮಣ್ ಎಚ್ಚರಿಕೆ ಕೊಟ್ಟರು.
ನಾಳೆ ಬಿಬಿಸಿ ಸಾಕ್ಷ್ಯ ಚಿತ್ರ ಪ್ರದರ್ಶನ: "ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ. ಸಾಕ್ಷ್ಯಚಿತ್ರದಲ್ಲಿ ಇರುವ ಸತ್ಯಾಂಶ ಜನರಿಗೆ ಗೊತ್ತಾಗಬೇಕು. ಅದಕ್ಕಾಗಿ ನಾಳೆ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡುತ್ತೇವೆ, ಅದು ಹೇಗೆ ತಡೆಯುತ್ತಿರೋ ತಡೆಯಿರಿ" ಎಂದು ಹೇಳಿದರು.
ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ತಾರೆ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುವ ವಿಚಾರ ಕೇಳಿ ಜೆಡಿಎಸ್ ಹಾಗೂ ಬಿಜೆಪಿಗಳಲ್ಲಿ ಭಯ ಶುರುವಾಗಿದೆ. ಅವರು ಕೋಲಾರದಿಂದ ಸ್ಪರ್ಧಿಸಿದರೆ ಅದರ ಪ್ರಭಾವ ಸುತ್ತಮುತ್ತಲ ಜಿಲ್ಲೆಗಳ 15 ರಿಂದ 20 ಕ್ಷೇತ್ರಗಳ ಮೇಲಾಗುತ್ತದೆ. ಅವರು ಮುಖ್ಯಮಂತ್ರಿಗಳಾಗಿದ್ದಾಗ ಬರಡು ಭೂಮಿಯಾಗಿದ್ದ ಕೋಲಾರಕ್ಕೆ ಕೆ ಸಿ ವ್ಯಾಲಿಯಂತಹ ಯೋಜನೆ ನೀಡಿದ್ದರು. ಇಡೀ ಕೋಲಾರ ಜಿಲ್ಲೆ ಈಗ ಹಸಿರಿನಿಂದ ಕೂಡಿದೆ. ಜನರು ನೆಮ್ಮದಿಯಿಂದ ಬದುಕುವಂತಾಗಿದೆ. ಅವರು ಅಲ್ಲಿಂದ ಸ್ಪರ್ಧಿಸಿದರೆ ಸುಮಾರು 40 ರಿಂದ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.
ಇದನ್ನೂ ಓದಿ: ರಾಜಕಾರಣ ಹೊಲಸಾಗಿದೆ.. ಮೌಲ್ಯಗಳನ್ನು ಕಳೆದುಕೊಂಡಿದೆ: ಹೆಚ್.ವಿಶ್ವನಾಥ್ ಅಸಮಾಧಾನ