ಮೈಸೂರು : ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಕೆಲ ತಿಂಗಳು ಮನೆ ತೊರೆದಿದ್ದ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಸಿಂಗರ ಮಾರನಹಳ್ಳಿಯಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಸಿಂಗರಮಾರನಹಳ್ಳಿ ಗ್ರಾಮದ 17ವರ್ಷ ವಯಸ್ಸಿನ ಅಪ್ರಾಪ್ತೆ ಹಾಗೂ ಇದೇ ಗ್ರಾಮದ ರಾಕೇಶ್ (24) ನೇಣಿಗೆ ಶರಣಾದ ಪ್ರೇಮಿಗಳು.
ಮಗಳು ಕಾಣೆಯಾಗಿರುವ ಬಗ್ಗೆ ತಂದೆ ಕುಮಾರ್ ಅವರು ಬಿಳಿಕೆರೆ ಠಾಣೆಯಲ್ಲಿ 2021ರ ಸೆಪ್ಟೆಂಬರ್ 23ರಂದು ದೂರು ನೀಡಿದ್ದರು. ಇತ್ತ ತಮ್ಮ ಪುತ್ರ ಕಾಣೆಯಾಗಿದ್ದಾನೆಂದು ವಾರದ ನಂತರ 2021ರ ಸೆಪ್ಟೆಂಬರ್ 29ರಂದು ರಾಕೇಶ್ ತಂದೆ ವಿಜಯಕುಮಾರ್ ಸಹ ದೂರು ನೀಡಿದ್ದರು.
ಇದನ್ನೂ ಓದಿ: ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್‌ಸಿಂಕ್, ಡ್ಯಾನ್ಸ್: ತಾಂಜಾನಿಯಾ ಪ್ರಜೆಗೆ ಅಭಿನಂದನೆ
ಆದರೆ, ಈವರೆಗೂ ಪ್ರೇಮಿಗಳಿಬ್ಬರೂ ಪತ್ತೆಯಾಗಿರಲಿಲ್ಲ. ಮಂಗಳವಾರ ರಾತ್ರಿ ಬಾಲಕಿ ಮತ್ತು ರಾಕೇಶ್ ಸಿಂಗರಮಾರನಹಳ್ಳಿ ಗ್ರಾಮಕ್ಕೆ ಬಂದಿದ್ದರು ಎನ್ನಲಾಗ್ತಿದೆ. ಬಳಿಕ ಊರಿನ ಹೊರವಲಯದಲ್ಲಿರುವ ಜಮೀನಿನಲ್ಲಿದ್ದ ಹಲಸಿನಮರಕ್ಕೆ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಬಿಳಿಕೆರೆ ಠಾಣೆ ಎಸ್ಐ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.