ಮೈಸೂರು: ಜಿಲ್ಲೆಯ ನಂಜನಗೂಡಿನ ಅಡಕನಹಳ್ಳಿ ಹುಂಡಿ ಕೈಗಾರಿಕೆ ಪ್ರದೇಶದಲ್ಲಿ ಕೇರಳದ ಔಷಧಿಯ ತ್ಯಾಜ್ಯಗಳನ್ನು ಸುರಿಯುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡು ಓರ್ವ ವ್ಯಕ್ತಿಯನ್ನು ನಂಜನಗೂಡು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಅಫ್ಜಲ್, ಸೈಯದ್ ಮಹಮದ್‌ನನ್ನು ಬಂಧಿಸಿ, ಕೆಎಲ್-11, ಎಕ್ಸ್ 1654 ಮತ್ತು ಕೆಎ 01, ಡಿ-1486 ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇರಳ ರಾಜ್ಯದ ತ್ಯಾಜ್ಯವನ್ನು ಅಕ್ರಮವಾಗಿ ಕರ್ನಾಟಕಕ್ಕೆ ತಂದು ಸುರಿಯುತ್ತಿರುವುದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ನಂಜನಗೂಡಿನ ಅಡಕನಹಳ್ಳಿ ಹುಂಡಿ ಕೈಗಾರಿಕಾ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಪೊಲೀಸರು ತ್ಯಾಜ್ಯ ತುಂಬಿಕೊಂಡು ಹೋಗುತ್ತಿದ್ದ ಲಾರಿಗಳಿಂದ ಹೊಮ್ಮುತ್ತಿದ್ದ ಕೆಟ್ಟ ವಾಸನೆಯಿಂದ ಗುಮಾನಿಗೊಂಡು ಅವುಗಳನ್ನು ನಿಲ್ಲಿಸಿ ಪರಿಶೀಲಿಸಿದಾಗ ವಿಚಾರ ತಿಳಿದು ಬಂದಿದೆ.
ಲಾರಿಯಲ್ಲಿದ್ದ ಐದಾರು ಜನರು ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಕೇರಳದಿಂದ ಮೆಡಿಸನ್ ತ್ಯಾಜ್ಯ ತಂದು ಸುರಿಯುತ್ತಿರುವ ಬಗ್ಗೆ ಆರೋಪಿ ಅಫ್ಜಲ್ ಒಪ್ಪಿಕೊಂಡಿದ್ದಾನೆ. ಪರಾರಿಯಾದ ಶೋಹೆಬ್, ತನ್ವೀರ್, ಶ್ರೀಕಂಠ ಎಂಬ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.