ಮೈಸೂರು: ನ.12ರ ಸಂಜೆ ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್ಪ್ರೆಸ್ ರೈಲು ಗಾಡಿ ಸಂ. 06275ರ ಲೋಕೋ ಪೈಲಟ್ (ಚಾಲಕ) ನಂಜನಗೂಡು ಮತ್ತು ಕಡಕೋಳ ರೈಲ್ವೆ ನಿಲ್ದಾಣಗಳ ನಡುವಿನ ಹಳಿಯಲ್ಲಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ರೈಲ್ವೆ ಇಂಜಿನ್ನ ಚಾಲಕನ ತ್ವರಿತ ಪ್ರತಿಕ್ರಿಯೆಯಿಂದಾಗಿ ಸಾವಿರಾರು ಪ್ರಯಾಣಿಕರ ಜೀವ ಉಳಿದಿದ್ದು, ದುರುದ್ದೇಶಪೂರಿತ ರೈಲು ಅವಘಡದ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸೋಮಯ್ ಮರಾಂಡಿ (22), ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂಬ ಮೂವರು ಆರೋಪಿಗಳನ್ನು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಬಂಧಿಸಿದ್ದಾರೆ. ಈ ಮೂವರು ಉದ್ದೇಶಪೂರ್ವಕವಾಗಿ ಕಿಲೋ ಮೀಟರ್ ನಂ. 19/200-300 ರಲ್ಲಿ ಹಳಿಗಳ ಮೇಲೆ ಕಬ್ಬಿಣದ ಸ್ಲೀಪರ್ ಮತ್ತು ಮರದ ದಿಮ್ಮಿಗಳನ್ನು ಇರಿಸಿದ್ದರು. ಇದರಿಂದಾಗಿ ರೈಲು ಗಾಡಿ ಸಂ. 06275 ಅನ್ನು ತುರ್ತಾಗಿ ನಿಲ್ಲಿಸಬೇಕಾಯಿತು.
ಮಾಹಿತಿ ಪಡೆದ ಮೈಸೂರಿನ ರೈಲ್ವೆ ಸಂರಕ್ಷಣಾ ದಳದ (ಆರ್‌ಪಿಎಫ್) ಸಹಾಯಕ ರಕ್ಷಣಾ ಆಯುಕ್ತರಾದ ಎಂ.ಎನ್.ಎ.ಖಾನ್, ಪೋಸ್ಟ್ ಕಮಾಂಡರ್ ಆದ ಕೆ.ವಿ. ವೆಂಕಟೇಶ ಮತ್ತು ಅವರ ತಂಡ, ಆರ್ಪಿಎಫ್ನ ಶ್ವಾನದಳ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಒಡಿಶಾದ ಮಯೂರ್ಬಂಜ್ನ ಬಂಗಿರಿಪೋಸಿದ ಜಲ್ದಿಹಾ ಮೂಲದ ಸೋಮಯ್ ಮರಾಂಡಿ ಎಂಬಾತ ಸ್ಥಳದಲ್ಲಿ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ, ತನ್ನ ಸಹಚರರೊಂದಿಗೆ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿನ ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ನ.13, 2023 ರಂದು ರೈಲ್ವೆ ಕಾಯಿದೆ-1989 ರ ಅನ್ವಯ Cr.No.39/2023 U/s 150(1)(A) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆಯು ನಡೆಯುತ್ತಿದ್ದು, ಜೀವಾವಧಿವರೆಗಿನ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.
ಘಟನೆಯ ಕಾರಣಕ್ಕಾಗಿ ರೈಲು ಸಂಖ್ಯೆ 06275 ಅನ್ನು ಸ್ವಲ್ಪ ಸಮಯದವರೆಗೆ - 18.39 ರಿಂದ 18.45 ಗಂಟೆಗಳವರೆಗೆ - ತಡೆಹಿಡಿಯಲಾಯಿತು. ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ಅವರು ಲೋಕೋಪೈಲಟ್ ಅವರ ಸಮಯೋಚಿತ ಕ್ರಮ ಮತ್ತು ಭದ್ರತಾ ಪಡೆಗಳ ತ್ವರಿತ ಕಾರ್ಯಾಚರಣೆ ಬಗ್ಗೆ ಶ್ಲಾಘಿಸಿ, ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ವಿಚಾರಿಸಿಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ.
ಹಳಿಗಳ ಮೇಲೆ ಇಂತಹ ಕೃತ್ಯದಲ್ಲಿ ತೊಡಗಿ ಪ್ರಯಾಣಿಕರಿಗೆ ದೊಡ್ಡ ಆಪತ್ತು ತರುವ ಮತ್ತು ಜೀವಹಾನಿ ಉಂಟುಮಾಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಅಂತಹ ಚಟುವಟಿಕೆಗಳಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ರೈಲ್ವೆ ಆಡಳಿತವು ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: ಬಿಹಾರ, ಉತ್ತರ ಪ್ರದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು; ಇಬ್ಬರ ಬಂಧನ