ಮೈಸೂರು: ಮೈಸೂರಿನಲ್ಲಿ ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮಳೆಯಿಂದ ಅಡ್ಡಿ ಉಂಟಾದರೆ, ಬದಲಿ ವ್ಯವಸ್ಥೆ ಮಾಡಲು ಪೊಲೀಸರು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಮಳೆಯಿಂದ ರಕ್ಷಣೆ ಹಾಗೂ ಭದ್ರತೆ ದೃಷ್ಟಿಯಿಂದ ಬದಲಿ ಸ್ಥಳವಾಗಿ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಯೋಗ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ.
ಈ ಸಂಬಂಧ ಡಿಸಿಪಿ ಗೀತಾ ಪ್ರಸನ್ನ ಅವರು ಇಂದು ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣ ಪರಿಶೀಲಿಸಿದರು. ವೇದಿಕೆ ಎಲ್ಲಿ ಸಿದ್ಧಪಡಿಸುವುದು, ವಿವಿಐಪಿ, ವಿಐಪಿಗೆ ಸ್ಥಳ, ಯೋಗ ಮಾಡುವ ಸ್ಥಳ, ಪಾರ್ಕಿಂಗ್ ವ್ಯವಸ್ಥೆ ಪರಿಶೀಲಿಸಿದರು. ವಾಹನಗಳ ಮಾರ್ಗದರ್ಶನದ ಬಗ್ಗೆ ಮಾಹಿತಿ ಪಡೆದುಕೊಂಡರು. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಮಾಹಿತಿ ನೀಡಿದರು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ಆಗಮನ: ವಿಕ್ರಂ ಸಿಂಗ್
ಒಂದು ವೇಳೆ ಮಳೆ ಬಂದರೆ ಬದಲಿಯಾಗಿ ಕಾರ್ಯಕ್ರಮ ಸಂಘಟಿಸಲು ಒಳಾಂಗಣ ಕ್ರೀಡಾಂಗಣ ಪರಿಶೀಲಿಸಲಾಗಿದೆ ಎಂದಷ್ಟೇ ಹೇಳಿ ಗೀತಾ ಪ್ರಸನ್ನ ಅವರು ಕಾರ್ಯಕ್ರಮದ ನಿಮಿತ್ತ ಹೊರಟರು. ಈಗಾಗಲೇ ಮೈಸೂರಿನ ವಿಮಾನ ನಿಲ್ದಾಣದಿಂದ ಅರಮನೆಯವರೆಗೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆ ಆರಂಭಗೊಂಡಿದೆ. ಅಲ್ಲದೇ ನಗರದ ಪ್ರಮುಖ ರಸ್ತೆಗಳ ಲೈನ್ಗಳಿಗೆ ಬಿಳಿಬಣ್ಣ ಬಳಿಯಲಾಗುತ್ತಿದೆ. ಅಲ್ಲದೇ ಡಿವೈಡರ್ಗಳಲ್ಲಿ ಬೆಳೆದಿರುವ ಗಿಡ - ಗಂಟಿಗಳನ್ನು ತೆಗೆದು ಸ್ವಚ್ಛ ಮಾಡಲಾಗುತ್ತಿದೆ.