ಮೈಸೂರು: ಮಂಡ್ಯ ಜಿಲ್ಲೆಯ ಉರೀಗೌಡ ಮತ್ತು ನಂಜೇಗೌಡ ಅವರು ಟಿಪ್ಪುವನ್ನು ಕೊಂದಿದ್ದು ಎಂಬ ವಿಚಾರವನ್ನು ಬಿಜೆಪಿಯವರು ಮುಂದೆ ಇಟ್ಟುಕೊಂಡು ಒಕ್ಕಲಿಗರ ವೋಟ್ ಅನ್ನು ಪಡೆಯಲು ಪ್ಲಾನ್ ಮಾಡುತ್ತಿದ್ದಾರೆ. ಕೂಡಲೇ ಒಕ್ಕಲಿಗ ಸಂಘದವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಮಾಧ್ಯಮಗೋಷ್ಟಿ ಮೂಲಕ ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿಂದು ಮಾತನಾಡಿದ ಅವರು, ಬಿಜೆಪಿಯವರು ಉರೀಗೌಡ ಮತ್ತು ನಂಜೇಗೌಡರು ಟಿಪ್ಪು ಸುಲ್ತಾನ್ನನ್ನು ಕೊಂದಿದ್ದು ಎಂಬ ವಿಚಾರವನ್ನು ಚುನಾವಣೆಯ ಅಸ್ತ್ರವನ್ನಾಗಿ ಇಟ್ಟುಕೊಂಡು, ಒಕ್ಕಲಿಗರ ವೋಟ್ ಬ್ಯಾಂಕ್ಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಆ ಮೂಲಕ ಒಕ್ಕಲಿಗ ಸಮುದಾಯದ ತೇಜೋವಧೆಗೆ ಕಾರಣರಾಗಿದ್ದು, ಕೂಡಲೇ ಒಕ್ಕಲಿಗ ಸ್ವಾಮೀಜಿ ಹಾಗೂ ಒಕ್ಕಲಿಗ ಸಂಘಟನೆಯವರು, ಒಕ್ಕಲಿಗರ ಸಮುದಾಯದ ಮರ್ಯಾದೆ ಹರಾಜು ಮಾಡುತ್ತಿರುವ ಸಿ.ಟಿ. ರವಿ, ಶೋಭಾ ಕರಂದ್ಲಾಜೆ ಹಾಗೂ ಸಚಿವ ಅಶ್ವತ್ಥನಾರಾಯಣ್ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಸಂತೋಷ್ ಅಥವಾ ಪ್ರಹ್ಲಾದ್ ಜೋಶಿ ಸಿಎಂ: ಲಿಂಗಾಯತರನ್ನು ಹೊರತುಪಡಿಸಿ ಪಕ್ಷವನ್ನು ಕಟ್ಟಬೇಕು ಎಂಬುದು ಆರ್ಎಸ್ಎಸ್ ಅಜೆಂಡಾ. ಈ ಬಗ್ಗೆ ಮೈಸೂರಿನ ಹೋಟೆಲ್ ಒಂದರಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಲಿಂಗಾಯತರು ಹಾಗೂ ಬಿ.ಎಸ್. ಯಡಿಯೂರಪ್ಪ ಹಿಡಿತದಿಂದ ಪಕ್ಷ ಹೊರಗೆ ಬರಬೇಕು ಎಂಬ ಚರ್ಚೆಗಳು ನಡೆಯುತ್ತಿವೆ ಎಂದು ಲಕ್ಷಣ್ ಆರೋಪಿಸಿದರು.
ಒಮ್ಮೆ ಸೋತರು ಸರಿಯೇ ಲಿಂಗಾಯತರನ್ನು ಹೊರತುಪಡಿಸಿ ಚುನಾವಣೆ ಗೆಲ್ಲಬೇಕೆಂದು ಅವರ ಅಜೆಂಡಾ, ಅದಕ್ಕಾಗಿ ಸುಮ್ಮನೆ ಯಡಿಯೂರಪ್ಪನವರನ್ನ ಮುಂದೆ ಇಟ್ಟುಕೊಂಡು ಮಾತನಾಡಿಸುತ್ತಿದ್ದಾರೆ. ಪುನಃ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂತೋಷ್ ಅಥವಾ ಪ್ರಹ್ಲಾದ್ ಜೋಶಿ ಸಿಎಂ ಆಗಲಿದ್ದಾರೆ. ಯಾವ ಕಾರಣಕ್ಕೂ ಲಿಂಗಾಯತರು ಸಿಎಂ ಆಗುವುದಿಲ್ಲ ಎಂದು ಲಕ್ಷ್ಮಣ್ ಭವಿಷ್ಯ ನುಡಿದರು.
ಛಲವಾದಿ ನಾರಾಯಣಸ್ವಾಮಿ ಹೇಳಿಕೆ ಸರಿ ಅಲ್ಲ - ಲಕ್ಷ್ಮಣ್: ಧ್ರುವನಾರಾಯಣ್ ಸಾವಿಗೆ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಮಹಾದೇವಪ್ಪ ಕಾರಣ ಎಂದು ಬಿಜೆಪಿಯ ಎಂಎಲ್ಸಿ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ಸರಿಯಲ್ಲ. ಛಲವಾದಿ ಎಂದು ಹೆಸರಿಟ್ಟುಕೊಂಡು ಸಮುದಾಯದ ಯಾರೊಬ್ಬರನ್ನು ಮಂತ್ರಿ ಮಾಡಲಿಲ್ಲ ಹಾಗೂ ಬಿಜೆಪಿ ಸರ್ಕಾರ ಬಂದಮೇಲೆ ಹಿಂದುಳಿದ ವರ್ಗದ ಬಡ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಲ್ಯಾಪ್ಟಾಪ್ ಅನ್ನು ಬಿಜೆಪಿಯವರು ನಿಲ್ಲಿಸಿದರು. ಕಾಂಗ್ರೆಸ್ನಿಂದ ಎಲ್ಲವನ್ನೂ ಪಡೆದು ಹೋದ ಛಲವಾದಿ ನಾರಾಯಣ ಸ್ವಾಮಿಯನ್ನು ಬಿಜೆಪಿಯವರು ಸಮುದಾಯವನ್ನು ಎತ್ತಿ ಕಟ್ಟುವ ಕೆಲಸದಲ್ಲಿ ನಾರಾಯಣ ಸ್ವಾಮಿಯವರನ್ನ ಬಳಸಿಕೊಳ್ಳುತ್ತಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದರು.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಕುರಿತು ಟೀಕೆ: ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿರುವುದು ಸರಿಯಲ್ಲ. ಸ್ನೇಹಿತರ ಮನೆಯಲ್ಲಿ ಜಾಗ ಕೊಟ್ಟವರ ಗಂಡನನ್ನೇ ಲಪಟಾಯಿಯಿಸಿಕೊಂಡು ಬಂದವರು ತಮ್ಮ ಗಂಡ ಇರಾನಿ ಬಗ್ಗೆ ಸ್ವಲ್ಪ ಮಾತನಾಡಲಿ. ಅದನ್ನು ಬಿಟ್ಟು ರಾಹುಲ್ ಗಾಂಧಿ ಸಂಸ್ಕೃತಿಯ ಬಗ್ಗೆ ಮಾತನಾಡುವ ಮೊದಲು ತಮ್ಮ ಗಂಡ ಇರಾನಿ ಯಾರೆಂಬುದನ್ನ ಮೊದಲು ತಿಳಿಸಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಲಕ್ಷ್ಮಣ್ ಹರಿಹಾಯ್ದರು.
ಇದನ್ನೂ ಓದಿ: ತುಮಕೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ.. ಜೆಪಿ ನಡ್ಡಾ ರೋಡ್ ಶೋ