ಮೈಸೂರು: ನಗರದ ಆರ್ಬಿಐ ಹಿಂಭಾಗದ ಶ್ಯಾದನಹಳ್ಳಿ ಗ್ರಾಮದ ಹೊರವಲಯದಲ್ಲಿ ಮೂರು ವರ್ಷದ ಗಂಡು ಚಿರತೆ ಸೆರೆಯಾಗಿದೆ. ಶ್ಯಾದನಹಳ್ಳಿ ಹೊರವಲಯದಲ್ಲಿ ಆಗಾಗ ಚಿರತೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಜಮೀನಿನಲ್ಲಿ ಬೋನ್ ಇಟ್ಟಿದ್ದರು. ಆಹಾರ ಅರಸಿ ಬಂದ ಚಿರತೆಯು ಭಾನುವಾರ ರಾತ್ರಿ ಬೋನಿಗೆ ಬಿದ್ದಿದ್ದು, ವಿಷಯ ತಿಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಆರ್ಎಫ್ಒ ಕೆ.ಸುರೇಂದ್ರ ಮತ್ತು ಸಿಬ್ಬಂದಿ ಸೆರೆಯಾಗಿರುವ ಚಿರತೆಯನ್ನು ಕಾಡಿಗೆ ಬಿಡಲು ನಿರ್ಧರಿಸಿದ್ದಾರೆ.
ಮೂರು ದಿನದ ಹಿಂದೆ ರಸ್ತೆಯಲ್ಲಿ ಓಡಾಡುತ್ತಿದ್ದ ಚಿರತೆ: ಚಿರತೆಯೊಂದು ಮೂರು ದಿನಗಳ ಹಿಂದೆ ಮೈಸೂರು ನಗರ ಪ್ರದೇಶದಲ್ಲಿ ರಸ್ತೆ ದಾಟಿದ ವಿಡಿಯೋ ನೋಡಿ ಜನರು ಭಯಭೀತರಾಗಿದ್ದಾರೆ. ಮೈಸೂರಿನ ಆರ್.ಟಿ.ನಗರದ ಉರುಕಾತೇಶ್ವರಿ ದೇವಸ್ಥಾನ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ರಾತ್ರಿ ವೇಳೆ ರಸ್ತೆ ಬದಿ ಮಣ್ಣಿನ ಗುಡ್ಡದ ಹಿಂಭಾಗ ಅವಿತಿದ್ದ ಚಿರತೆ ರಸ್ತೆ ದಾಟಿದೆ. ಈ ದೃಶ್ಯ ರಸ್ತೆಯಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿರುವ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ತಿ.ನರಸೀಪುರದಲ್ಲಿ ನಿಲ್ಲದ ಚಿರತೆ ಹಾವಳಿ: ತಿ.ನರಸೀಪುರದಲ್ಲಿ ಮೂರು ತಿಂಗಳಿನಲ್ಲಿ ನಾಲ್ವರನ್ನು ಬಲಿ ಪಡೆದಿರುವ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆಯು ಕಾರ್ಯಾಚರಣೆ ನಡೆಸುತ್ತಿದ್ದರೂ ಸಹ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿವೆ.
ಇದನ್ನೂ ಓದಿ: ಕನ್ನಾಳ ಗುಡ್ಡದಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಹೆಣ್ಣು ಚಿರತೆ: ಗ್ರಾಮಸ್ಥರು ನಿರಾಳ
ಈ ಹಿಂದೆ ನಡೆದ ಘಟನೆಗಳಿವು.. ಮೈಸೂರಿನಲ್ಲಿ ಚಿರತೆ ದಾಳಿಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಮೊನ್ನೆಯಷ್ಟೇ ತಿ. ನರಸೀಪುರ ತಾಲೂಕಿನಲ್ಲಿ 11 ವರ್ಷದ ಬಾಲಕನನ್ನು ಚಿರತೆಯು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ನಡೆದಿತ್ತು. ಕಳೆದ ತಿಂಗಳು ತಿ.ನರಸೀಪುರ ತಾಲೂಕಿನ ಕನ್ನನಾಯಕನಹಳ್ಳಿಯಲ್ಲಿ ಸಿದ್ಧಮ್ಮ ಎಂಬ ವೃದ್ಧೆಯ ಮೇಲೆ ಚಿರತೆ ದಾಳಿ ಮಾಡಿತ್ತು. ಅವರು ಮನೆಯಾಚೆಯಿದ್ದ ಸೌದೆ ತರಲೆಂದು ಹೊರಗೆ ಬಂದಿದ್ದ ವೇಳೆ ದಾಳಿ ಮಾಡಿ ಕೆಲ ದೂರ ಎಳೆದೊಯ್ದಿತ್ತು. ಇದರಿಂದ ವೃದ್ಧೆ ಸಾವನ್ನಪ್ಪಿದ್ದರು.
ಕಳೆದ ವರ್ಷ ಅಕ್ಟೋಬರ್ನಲ್ಲಿ ತಿ.ನರಸೀಪುರ ತಾಲೂಕಿನ ಮದ್ಗಾರ್ ಲಿಂಗಯ್ಯನಹುಂಡಿ ಗ್ರಾಮದ ಬಳಿ ಮಂಜುನಾಥ್ ಎಂಬ 18 ವರ್ಷದ ಯುವಕನ್ನು ಚಿರತೆ ಬಲಿ ಪಡೆದಿತ್ತು. ಅಲ್ಲದೇ ಡಿಸೆಂಬರ್ 1ರಂದು 22 ವರ್ಷದ ಮೇಘನಾ ಎಂಬ ಯುವತಿ ಚಿರತೆ ದಾಳಿಗೆ ಬಲಿಯಾಗಿದ್ದರು.
ಮಂಡ್ಯದಲ್ಲಿ ವ್ಯಕ್ತಿಯ ಮೇಲೆ ಚಿರತೆ ದಾಳಿ: ಸಕ್ಕರೆ ನಾಡು ಮಂಡ್ಯದಲ್ಲಿ ಚಿರತೆ ದಾಳಿ ಹೆಚ್ಚಾಗಿದೆ. ಜನವರಿ 30ರಂದು ಕಬ್ಬು ಕಟಾವಿನಲ್ಲಿ ತೊಡಗಿದ್ದ ವ್ಯಕ್ತಿಯ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿತ್ತು. ಇದನ್ನು ಕಂಡು ಇತರೆ ಕೂಲಿ ಕಾರ್ಮಿಕರ ಕೂಗಾಟ ಚೀರಾಟದಿಂದ ಚಿರತೆ ಗಾಬರಿಗೊಂಡು ತಪ್ಪಿಸಿಕೊಂಡಿತ್ತು. ದಾಳಿಯಲ್ಲಿ ಜಯರಾಮ್ ಅವರಿಗೆ ಮುಖ, ಕಿವಿ ಮತ್ತು ಕತ್ತಿನ ಭಾಗಗಳಲ್ಲಿ ಗಾಯಗಳಾಗಿತ್ತು. ಕೂಡಲೇ ಅವರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ: ರಸ್ತೆಯಲ್ಲಿ ವಾಹನ ಸವಾರನಿಗೆ ಎದುರಾದ ಚಿರತೆ: ಮೊಬೈಲ್ ಕ್ಯಾಮರಾದಲ್ಲಿ ದೃಶ್ಯ ಸೆರೆ