ಮೈಸೂರು: ನಾಗರಹೊಳೆ ವ್ಯಾಪ್ತಿಯ ಪಿರಿಯಾಪಟ್ಟಣ ತಾಲೂಕಿನ ಬೂದಿತಿಟ್ಟು ಕಾಡಂಚಿನ ಪ್ರದೇಶದಲ್ಲಿ 4 ವರ್ಷದ ಗಂಡು ಚಿರತೆ ಉರುಳಿಗೆ ಸಿಲುಕಿ ಸಾವನ್ನಪ್ಪಿದೆ.
ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಉರುಳಿನಲ್ಲಿ ಸಿಲುಕಿರುವ ಚಿರತೆಯನ್ನು ಕಂಡು ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಕಾಡಿನೊಳಗೆ ಅತಿಕ್ರಮ ಪ್ರವೇಶ ಮಾಡಿ ಕಾಡು ಪ್ರಾಣಿಗಳ ಬೇಟೆಗಾಗಿ ಉರುಳು ಹಾಕಿರುವುದರಿಂದ ಬೆಚ್ಚಿಬಿದ್ದಿದ್ದಾರೆ. ಕಾಡು ನಿರ್ಬಂಧಿತ ಪ್ರದೇಶವೆಂದು ತಿಳಿದಿದ್ದರೂ ಉರುಳು ಹಾಕಿರುವುದು ಅರಣ್ಯಾಧಿಕಾರಿಗಳಿಗೆ ತಲೆನೋವು ತರಿಸಿದೆ.
ಮೃತಪಟ್ಟಿರುವ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ, ಅಲ್ಲಿಯೇ ಅಂತ್ಯಸಂಸ್ಕಾರ ನಡೆಸಲಾಗಿದೆ. ಸದ್ಯ ಉರುಳು ಹಾಕಿದ ಸ್ಥಳದಲ್ಲಿ ಸಿಬ್ಬಂದಿ ಅಲಟ್೯ ಆಗಿದ್ದಾರೆ.