ಮೈಸೂರು: ಕಬ್ಬಿನ ಗದ್ದೆಯೊಂದರಲ್ಲಿ ಕಬ್ಬು ಬೆಳೆ ಕಟಾವಿನ ವೇಳೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿರುವ ಘಟನೆ ಟಿ.ನರಸೀಪುರ ತಾಲೂಕಿನ ಗುಡ್ಡದ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕಬ್ಬು ಕಟಾವು ಮಾಡಲು ಬಂದಿದ್ದ ಕೂಲಿ ಕಾರ್ಮಿಕರು ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಟಿ.ನರಸೀಪುರ ತಾಲೂಕಿನ ಗುಡ್ಡದ ಕೊಪ್ಪಲು ಗ್ರಾಮದಲ್ಲಿ, ದೊರೆಸ್ವಾಮಿ ಎಂಬುವವರ ಜಮೀನಿನಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ.
ಅವರ ಜಮೀನಿನಲ್ಲಿ ಕಬ್ಬು ಬೆಳೆಯನ್ನು ಕಟಾವು ಮಾಡುವ ಸಮಯದಲ್ಲಿ, ಕಬ್ಬಿನ ಗದ್ದೆಯಲ್ಲಿ 2 ಚಿರತೆ ಮರಿಗಳು ಕಾಣಿಸಿಕೊಂಡಿವೆ. ಈ ಚಿರತೆ ಮರಿಗಳನ್ನು ಕಬ್ಬು ಕಟಾವು ಮಾಡಲು ಬಂದಿದ್ದ ಕೂಲಿ ಕಾರ್ಮಿಕರು ರಕ್ಷಣೆ ಮಾಡಿದ್ದು. ರಕ್ಷಣೆ ಮಾಡಿದ ಚಿರತೆ ಮರಿಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಕೆಲಸಗಾರ ಹೇಳುವುದೇನು : "ಅರಣ್ಯ ಇಲಾಖೆಯಲ್ಲಿ ಮನವಿ ಮಾಡುತ್ತಿದ್ದೇನೆ, ಟಿ.ನರಸೀಪುರ ತಾಲೂಕಿನ ಗುಡ್ಡದಕೊಪ್ಪಲು ಗ್ರಾಮದ ಕಬ್ಬಿನ ಗದ್ದೆಯಲ್ಲಿ 2 ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು. ತಾಯಿ ಚಿರತೆ ಮಾತ್ರ ಇನ್ನೂ ಸಿಕ್ಕಿಲ್ಲ. ತಾಯಿ ಚಿರತೆ ಸಿಗಬೇಕು ಎಂದರೆ ಮರಿಗಳನ್ನು ಬೋನಿನಲ್ಲಿ ಇರಿಸಿದರೆ ಸುಲಭವಾಗಿ ಹಿಡಿಯಬಹುದು. ಸುಮಾರು ದಿನಗಳಿಂದ ಈ ಚಿರತೆ ಗ್ರಾಮಸ್ಥರಿಗೆ ಕಾಟ ಕೊಡುತ್ತಿತ್ತು. ಅರಣ್ಯ ಇಲಾಖೆಯವರು ಈ ಬಗ್ಗೆ ಗಮನ ಕೊಡಲಿಲ್ಲ. ಪಂಚಾಯಿತಿ ಪಿಡಿಒ ಆದ ಸಂತೋಷ್, ಚಂದ್ರೇಗೌಡ, ಮೋಹನ್ ಎಂಬುವವರು ಸೆರೆ ಹಿಡಿದಿದ್ದಾರೆ. ದಯವಿಟ್ಟು ಅರಣ್ಯ ಇಲಾಖೆಯವರು ತಾಯಿ ಚಿರತೆಯನ್ನ ಬೋನು ಇರಿಸಿ ಸೆರೆ ಹಿಡಿಯಬೇಕೆಂದು" ಕೆಲಸಗಾರರು ಮನವಿ ಮಾಡಿದ್ದಾರೆ.
ಚಿರತೆ ದಾಳಿಗೆ ಮೇಕೆ ಬಲಿ: ನಿನ್ನೆ(ಗುರುವಾರ)ಯಷ್ಟೇ ತಾಲೂಕಿನ ತುರಗನೂರು ಕಿರು ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಮೇಕೆ ಮೇಲೆ ದಾಳಿ ಮಾಡಿ ಕೊಂದಿದ್ದು,ಚಿರತೆ ದಾಳಿಯಿಂದ ಕಿರು - ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದರು. ಇದೀಗ ಚಿರತೆ ಮರಿಗಳು ಪ್ರತ್ಯಕ್ಷಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಚಿರತೆ ಹಾವಳಿ ತಪ್ಪಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯ ಸೆರೆಗಾಗಿ ಬೋನು ಇರಿಸಿದ್ದಾರೆ.
ಬೆಳಗಾವಿಯಲ್ಲಿ ಪತ್ತೆಯಾಗಿತ್ತು ಚಿರತೆ : ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಜಮೀನಿನಲ್ಲಿ ಚಿರತೆ ಓಡಾಡುತ್ತಿದ್ದು, ಚಿರತೆಯ ದೃಶ್ಯಗಳನ್ನು ಮೊಬೈಲ್ನಲ್ಲಿನ ಸೆರೆ ಹಿಡಿಯಲಾಗಿತ್ತು. ಚಿರತೆ ಹಿಡಿಯಲು ಕಾರ್ಯಾಚರಣೆಯನ್ನು ಪೊಲೀಸರು ಅರಣ್ಯ ಇಲಾಖೆಯವರು ನಡೆಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಪತ್ತೆಯಾಗಿದ್ದು ಚಿರತೆಯಲ್ಲ, ಕಿರುಬ ಬೆಕ್ಕು: ನಿಟ್ಟುಸಿರು ಬಿಟ್ಟ ಜನ