ಮೈಸೂರು: ತಿ.ನರಸೀಪುರ ತಾಲ್ಲೂಕಿನ ಮದ್ಗಾರ್ ಲಿಂಗಯ್ಯನಹುಂಡಿ ಗ್ರಾಮದ ಬಳಿ ಚಿರತೆ ದಾಳಿಗೆ ಯುವಕ ಬಲಿಯಾಗಿದ್ದಾನೆ. ಮಹಾರಾಜ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ (18) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮಲ್ಲಪ್ಪನ ಬೆಟ್ಟದ ಸಮೀಪವಿರುವ ಮುದ್ದು ಮಾರಮ್ಮ ದೇವಾಲಯಕ್ಕೆ ಸ್ನೇಹಿತರೊಂದಿಗೆ ಪೂಜೆಗೆಂದು ಹೋಗಿದ್ದಾಗ ಘಟನೆ ನಡೆದಿದೆ.
ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದಾಗ ಪೊದೆಯಿಂದ ಜಿಗಿದು ಬಂದ ಚಿರತೆ ಯುವಕನ ಮೇಲೆ ದಾಳಿ ನಡೆಸಿತು. ಸ್ನೇಹಿತರು ಚಿರತೆಗೆ ಕಲ್ಲು ಹೊಡೆದು ಮಂಜುನಾಥ್‌ನನ್ನು ರಕ್ಷಿಸಲು ಪ್ರಯತ್ನಿಸಿದ್ರೂ ಪ್ರಯೋಜನವಾಗಲಿಲ್ಲ. ಗ್ರಾಮಸ್ಥರು ಯುವಕರ ಸಹಾಯಕ್ಕೆ ಬರುವಷ್ಟರಲ್ಲೇ ಆತ ಮೃತಪಟ್ಟಿದ್ದನು. ಈ ಘಟನೆಯ ಹಿನ್ನೆಲೆಯಲ್ಲಿ ಮಲ್ಲಪ್ಪನ ಬೆಟ್ಟದ ಸುತ್ತಮುತ್ತಲಿನ ಗ್ರಾಮದ ಜನ ರಾತ್ರಿಯ ವೇಳೆ ಮನೆಯಿಂದ ಹೊರಬರಲು ಭಯಭೀತರಾಗಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಶಶಿಧರ್, ಬನ್ನೂರು ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ಎಂ.ಅಶ್ವಿನ್ ಕುಮಾರ್ ಕೂಡ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿ, ಮೃತನ ಕುಟುಂಬಕ್ಕೆ ಸರ್ಕಾರದಿಂದ ಸಿಗಬಹುದಾದ ಪರಿಹಾರವನ್ನು ದೊರಕಿಸುವ ಭರವಸೆ ನೀಡಿದರು.
ಇದನ್ನೂ ಓದಿ: ಹಸು ಕೊಂದು ಎಳೆದೊಯ್ದ ಚಿರತೆಯ ದೃಶ್ಯ ಸೆರೆ: ಆತಂಕದಲ್ಲಿ ಗ್ರಾಮಸ್ಥರು