ಮೈಸೂರು: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದ ಹಲವೆಡೆ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಭೂ ಕುಸಿತ ಸಂಭವಿಸಿದ್ದರಿಂದ ಸಂಚಾರ ನಿಷೇಧಿಸಲಾಗಿದ್ದು, ತ್ವರಿತ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಚಿವ ಸೋಮಶೇಖರ್ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಮಳೆಯಿಂದ ಮೈಸೂರು ನಗರದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಜನರು ಜಾಗರಣೆ ಮಾಡುವಂತಾಗಿತ್ತು. ದೊಡ್ಡ ಗಡಿಯಾರದ ಹತ್ತಿರ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿದ್ದು, ದೀಪಾಲಂಕಾರ ನೋಡಲು ಬಂದ ಜನರು ಮಳೆಯಲ್ಲಿ ಸಿಲುಕಿ ಪರದಾಡಿದರು. ನಿನ್ನೆ ಸಂಜೆ 6.30ಕ್ಕೆ ಆರಂಭವಾದ ಮಳೆ ಮಧ್ಯರಾತ್ರಿವರೆಗೂ ಸುರಿದಿದೆ.
ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಭೂ ಕುಸಿತ:
ಧಾರಾಕಾರ ಮಳೆಯಿಂದ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು, ರಸ್ತೆಯಲ್ಲಿ ಸಾರ್ವಜನಿಕರು, ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಸುಸ್ವಾಗತ ವಿದ್ಯುತ್ ಬೋರ್ಡ್ ಹಾಕಿರುವ ಸಮೀಪ ಮಳೆಯಿಂದಾಗಿ ಭೂ ಕುಸಿತವಾಗಿದೆ. ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಎರಡು ವರ್ಷಗಳ ಹಿಂದೆಯೂ ಇದೇ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿತ್ತು.
ಕ್ರಮಕ್ಕೆ ಸಚಿವರಿಂದ ಸೂಚನೆ:
ಭೂಕುಸಿತದ ದುರಸ್ತಿ ಕಾರ್ಯವನ್ನು ತ್ವರಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿಗೆ ಸಚಿವ ಎಸ್.ಟಿ.ಸೋಮಶೇಖರ್ ಸೂಚಿಸಿದ್ದಾರೆ. ಭೂ ಕುಸಿತದಿಂದ ರಸ್ತೆ ಹಾನಿಗೀಡಾಗಿರುವುದು ದುರದೃಷ್ಟಕರ. ಜಿಲ್ಲಾಧಿಕಾರಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ತುರ್ತು ಕ್ರಮ ಕೈಗೊಳ್ಳಬೇಕು. ಮುಂದಾಗಬಹುದಾದ ಅನಾಹುತ ತಪ್ಪಿಸಲು ಅಗತ್ಯ ಕ್ರಮವಹಿಸಿ, ಶೀಘ್ರದಲ್ಲೇ ನಾನು ಸ್ಥಳ ಪರಿಶೀಲನೆ ನಡೆಸುತ್ತೇನೆ. ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಿ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಆಲ್ಪೈನ್ ಗರ್ಲ್ ಆಫ್ ಇಂಡಿಯಾ- ಬೆಂಗಳೂರು ನಿವಾಸಿ ನಮ್ರತಾ ಟ್ರೆಕ್ಕಿಂಗ್ ಸಾಧನೆ