ಮೈಸೂರು : "ಐದು ಬಾರಿ ಚುನಾವಣೆಯಲ್ಲಿ ಸೋತು ಈ ಬಾರಿ ಗೆದ್ದು ಮಂತ್ರಿಯಾಗಿರುವ ಚಲುವರಾಯಸ್ವಾಮಿ ಏಳಿಗೆಯನ್ನು ಕೆಲವರು ಸಹಿಸುತ್ತಿಲ್ಲ. ಇದರಿಂದ ಈ ರೀತಿ ಆರೋಪಗಳು ಬರುತ್ತಿವೆ. ಈ ಪತ್ರಕ್ಕೂ, ಚಲುವರಾಯಸ್ವಾಮಿಗೂ ಯಾವುದೇ ಸಂಬಂಧ ಇಲ್ಲ" ಎಂದು ಮೈಸೂರಿನಲ್ಲಿಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬಳಸಿಕೊಂಡಿದ್ದು, ಹಿಂದೆ ಬಿಜೆಪಿ ಸರ್ಕಾರದ ಸಚಿವರಾಗಿದ್ದ ಗೋವಿಂದ ಕಾರಜೋಳ. ಆ ಹಣವನ್ನು ಆರ್ಎಸ್ಎಸ್ಗೆ ಮತ್ತು ಮೋದಿಯವರ ಕಾರ್ಯಕ್ರಮಗಳಿಗೆ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಆ ರೀತಿ ಮಾಡಿಲ್ಲ. ಈ ಬಗ್ಗೆ ಸ್ವತಃ ಉಸ್ತುವಾರಿ ಸಚಿವರೇ ಸ್ಪಷ್ಟನೇ ನೀಡಿದ್ದಾರೆ. ಬಿಜೆಪಿಯವರು ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ" ಎಂದರು.
"ಕೃಷಿ ಇಲಾಖೆಯ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂಬುದಕ್ಕೆ ಅಧಿಕಾರಿಗಳೇ ನಾವು ಪತ್ರ ಬರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಎಂಟು ಮಂದಿಯ ಸಹಿಯನ್ನು ಒಬ್ಬರೇ ಮಾಡಿದ್ದಾರೆ. ಕುಮಾರಸ್ವಾಮಿ ಆ್ಯಂಡ್ ಟೀಂ ಮಾತ್ರ ಒಕ್ಕಲಿಗ ಸಮುದಾಯದ ನಾಯಕರಲ್ಲ. ಚಲುವರಾಯಸ್ವಾಮಿಯವರು ಒಕ್ಕಲಿಗ ಸಮುದಾಯದ ನಾಯಕರೇ" ಎಂದು ಹೇಳಿದರು.
"ಕುಮಾರಸ್ವಾಮಿ ಪೆನ್ಡ್ರೈವ್ ಇಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ನನ್ನ ಬಳಿಯೂ ಪೆನ್ಡ್ರೈವ್ ಇದೆ. 18 ನಿಮಿಷದ 6 ಎಪಿಸೋಡ್ ಪೆನ್ಡ್ರೈವ್ ನನ್ನ ಬಳಿ ಇದೆ. ಕುಮಾರಸ್ವಾಮಿ ಅವರ ಬಳಿ ಇರುವ ಪೆನ್ಡ್ರೈವ್ ಮಾಹಿತಿಯನ್ನು ಅವರು ಬಹಿರಂಗಪಡಿಸಲಿ. ಅದಾದ ಒಂದು ಗಂಟೆಯೊಳಗೆ ನನ್ನ ಬಳಿ ಇರುವ ಪೆನ್ಡ್ರೈವ್ ಮಾಹಿತಿಯನ್ನು ನಾನು ಬಹಿರಂಗಪಡಿಸುತ್ತೇನೆ. ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ರೀತಿ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರಾಜ್ಯಕ್ಕೆ ಮಾಸ್ ಲೀಡರ್ಗಳು. ಅವರನ್ನು ಏನು ಮಾಡಲು ಆಗುವುದಿಲ್ಲ" ಎಂದರು.
"ಕುಮಾರಸ್ವಾಮಿಯವರು ಪದೇ ಪದೆ ವಿದೇಶಕ್ಕೆ ಹೋಗುತ್ತಿರುವ ಉದ್ದೇಶವೇನು?. ಯಾವ ಕಾರಣಕ್ಕಾಗಿ ಪ್ರವಾಸ ಮಾಡುತ್ತಿದ್ದಾರೆಂದು ತಿಳಿಸಲಿ. ವಿದೇಶದಲ್ಲಿ ಹಣ ಹೂಡಿಕೆಗೆ ಹೋಗುತ್ತಿದ್ದಾರಾ ಅಥವಾ ಬೇರೆ ಯಾವ ಕಾರಣಕ್ಕಾಗಿ ಹೋಗುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ" ಎಂದು ಲಕ್ಷ್ಮಣ್ ಹೇಳಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಬಣ್ಣದ ಕುರಿತು ಬಿಜೆಪಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಮೈಸೂರು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಆರಗ ಜ್ಞಾನೇಂದ್ರರ ಹೇಳಿಕೆಯನ್ನು ಖಂಡಿಸಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಮತೀಯವಾಗಿ ಹೇಳಿಕೆ ನೀಡಿದ ಆರಗ ಜ್ಞಾನೇಂದ್ರ ವಿರುದ್ಧ ಅವರ ಮುಖಕ್ಕೆ ಕಪ್ಪು ಮಸಿ ಬಳಿಯುವ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು. ಈ ಅಭಿಯಾನವನ್ನು ಮೈಸೂರಿನಿಂದಲೇ ಆರಂಭಿಸಲಾಗುವುದು ಎಂದರು.
ಇದನ್ನೂ ಓದಿ : Chaluvarayaswamy: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಪತ್ರ: ಸತ್ಯಾಸತ್ಯತೆಗೆ ಸಿಐಡಿ ತನಿಖೆ