ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದ್ದು, ಆದರೂ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಪ್ರತಿ ದಿನ ಪತ್ತೆಯಾಗುತ್ತಿವೆ. ಈ ಹಿನ್ನೆಲೆ ಸೋಂಕಿತರಿಗೆ ಹಾಸಿಗೆಗಳ ಕೊರತೆ ಉಂಟಾಬಾರದು ಎಂಬ ಮುಂದಾಲೋಚನೆಯಿಂದ ಜಿಲ್ಲೆಯಲ್ಲಿ ಅನೇಕ ಕೋವಿಡ್ ಕೇರ್ ಸೆಂಟರ್ಗಳನ್ನು ಸ್ಥಾಪಿಸಲಾಗಿದೆ.
ಮೈಸೂರಿನ ಹೊರವಲಯದ ಮಂಡಕಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕಾಡೆಮಿಕ್ ಭವನವನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಆಗಿ ಸ್ಥಾಪಿಸಲಾಗಿದ್ದು, ಇಲ್ಲಿ ಗುಣಲಕ್ಷಣವಿಲ್ಲದ ಕೊರೊನಾ ಸೋಂಕಿತ ವ್ಯಕ್ತಿಗಳನ್ನು ದಾಖಲಿಸಿಕೊಂಡು ರುಚಿಯಾದ ಊಟೋಪಚಾರ, ಮನರಂಜನಾ ವ್ಯವಸ್ಥೆ ಮುಂತಾದ ಸೌಲಭ್ಯಗಳ ಜೊತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕೇಂದ್ರದಲ್ಲಿ ದಾಖಲಾಗಿರುವ ವ್ಯಕ್ತಿಗಳು ಆರಾಮದಾಯಕವಾಗಿ ಗುಣಮುಖರಾಗಿ ಬರುತ್ತಿದ್ದಾರೆ.
600 ಹಾಸಿಗೆಯುಳ್ಳ ಮಾದರಿ ಕೋವಿಡ್ ಕೇರ್ ಸೆಂಟರ್:
ಅಕಾಡೆಮಿಕ್ ಭವನದಲ್ಲಿ ಸುಮಾರು 53 ಸಭಾಂಗಣಗಳಿದ್ದು, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ 2 ಮೀಟರ್ ಅಂತರದಲ್ಲಿ ಒಂದೊಂದರಲ್ಲಿ 15ರಿಂದ 20 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಹಾಸಿಗೆ, ಹೊದಿಕೆ, ತಲೆದಿಂಬು, ಸ್ನಾನದ ಕೊಠಡಿ, ಶೌಚಾಲಯ, ಬಟ್ಟೆ ಸ್ವಚ್ಛಗೊಳಿಸಲು ಅಗತ್ಯ ವ್ಯವಸ್ಥೆ ಎಲ್ಲವೂ ಇವೆ. ಸ್ನಾನಕ್ಕೆ ಬಿಸಿ ನೀರು ಇರುತ್ತದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನೂ ಒದಗಿಸಲಾಗಿದೆ.
ಮನರಂಜನೆಗೂ ಅವಕಾಶ:
ಕೊರೊನಾ ಸೋಂಕಿಗೆ ಒಳಗಾಗಿ ದಾಖಲಾದ ವ್ಯಕ್ತಿಗಳು ಅಲ್ಲೇ ಇರಬೇಕಾಗುವುದರಿಂದ ಏಕತಾನತೆ, ಬೇಸರ ಉಂಟಾಗಬಹುದು. ಅವರಿಗೆ ಯಾವುದೇ ರೀತಿಯಲ್ಲಿ ಬೇಸರ ಉಂಟಾಬಾರದು ಎಂಬ ಉದ್ದೇಶದಿಂದ ಮನರಂಜನೆಗಾಗಿ ಅಗತ್ಯವಿರುವ ಪೂರಕ ವಾತಾವರಣವನ್ನು ಮೈಸೂರು ಜಿಲ್ಲಾಡಳಿತ ಕಲ್ಪಿಸಿದೆ. ಸಭಾಂಗಣದಲ್ಲಿ ಒಳಾಂಗಣ ಕ್ರೀಡಾ ಪರಿಕರಗಳಾದ ಕೇರಂ ಬೋರ್ಡ್, ಚೆಸ್ ಹಾಗೂ ಬ್ಯಾಡ್ಮಿಂಟನ್ ಪರಿಕರಗಳನ್ನು ನೀಡಲಾಗಿದೆ. ಪ್ರತಿಯೊಂದು ಕೊಠಡಿಯಲ್ಲೂ ಕೇಬಲ್ ಸಂಪರ್ಕವಿರುವ ಟಿವಿ, ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ.
ವೈದ್ಯರಿಗೆ ಪ್ರತ್ಯೇಕ ವಿಭಾಗ:
ರೋಗಿಗಳ ಸುರಕ್ಷತೆಯಷ್ಟೇ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗೂ ಪ್ರಾಧಾನ್ಯತೆ ನೀಡಲಾಗಿದೆ. ಕೆಳ ಮಹಡಿಯಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆಂದೇ ಪ್ರತ್ಯೇಕ ವಿಭಾಗವನ್ನು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಗ್ರೀನ್ ಝೋನ್ ಎಂದು ಹೆಸರಿಡಲಾಗಿದೆ. ಇಲ್ಲಿ ವೈದ್ಯರು, ಸ್ಟಾಫ್ ನರ್ಸ್ ಹಾಗೂ ಆಡಳಿತ ಸಿಬ್ಬಂದಿ ಇರುತ್ತಾರೆ.
ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ:
ಇಲ್ಲಿ ಶುಚಿತ್ವಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶುಚಿತ್ವದ ಕೊರತೆ ನಿಭಾಯಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಶೌಚಾಲಯ ನಿರ್ವಹಣೆ ಸೇರಿದಂತೆ ಕೋವಿಡ್ ಔಷಧೀಯ ತ್ಯಾಜ್ಯವನ್ನು ಅತ್ಯಂತ ಜಾಗರೂಕತೆಯಿಂದ ವಿಲೇವಾರಿ ಮಾಡಲಾಗುತ್ತಿದೆ.
ಈ ಕೋವಿಡ್ ಕೇರ್ ಸೆಂಟರ್ನಲ್ಲಿ ಅತ್ಯುತ್ತಮವಾದ ವ್ಯವಸ್ಥೆ ಇದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ ಶ್ರೇಯಸ್ಸು ಇಲ್ಲಿನ ನೋಡಲ್ ಅಧಿಕಾರಿ ಡಾ. ಅಶೋಕ್ ಹಾಗೂ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಎಂ.ಟಿ.ಮಂಜುನಾಥ್ ಹಾಗೂ ಈ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಎಲ್ಲರಿಗೂ ಸಲ್ಲಬೇಕು ಅಂತಾರೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್.