ಮೈಸೂರು: ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಪಡಿಸಿರುವುದು ಬಹಳ ಸಂತೋಷದ ವಿಚಾರ. ಈ ವಿಚಾರದಲ್ಲಿ ಮೋದಿಯವರನ್ನು ಮೆಚ್ಚಲೇ ಬೇಕು ಎಂದು ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಪ್ರೊ.ಕೆ.ಎಸ್.ಭಗವಾನ್ ಮೋದಿ ಪರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
370ನೇ ವಿಧಿಯನ್ನು ರದ್ದು ಮಾಡಿರುವುದು ತುಂಬಾ ಸಂತೋಷ ತರುವ ವಿಚಾರ. ಕಾಶ್ಮೀರವೇ ಬೇರೆ, ಇಡಿ ಭಾರತವೇ ಬೇರೆ ಎಂಬ ಭಾವನೆ ಕಳೆದ 72 ವರ್ಷಗಳಿಂದ ಇತ್ತು. ಆದರೆ, ಈ ವಿಚಾರದಲ್ಲಿ ಎಲ್ಲವೂ ಒಂದೇ ಎಂಬ ಕಾನೂನು ಜಾರಿ ಮಾಡಿರುವುದು ಸರಿ. ಎಲ್ಲರೂ ಒಂದೇ ಎಂಬ ಭಾವನೆ ಈಗ ಮೂಡಿದೆ. ತೀವ್ರವಾಗಿ ಆಲೋಚನೆ ಮಾಡಿ ನಮ್ಮ ಪ್ರಧಾನ ಮಂತ್ರಿಗಳು, ಗೃಹ ಮಂತ್ರಿಗಳು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಿಚಾರದಲ್ಲಿ ತುಂಬ ಬುದ್ಧಿವಂತಿಕೆಯಿಂದ ದೇಶವೇ ಆಶ್ಚರ್ಯ ಪಡುವಂತೆ ಮಾಡಿದ್ದಾರೆ. ಇದು ನಮಗೆ ಸಂತೋಷವಾಗಿದೆ ಎಂದರು.
ಕಾಶ್ಮೀರ ವಿಚಾರದಲ್ಲಿ ಕೋಟಿಗಟ್ಟಲೆ ಹಣ ಕಾನೂನು ಸುವ್ಯವಸ್ಥೆಗೆ ಖರ್ಚಾಗುತ್ತಿತ್ತು, ಅದು ಈಗ ಉಳಿದಿದೆ ಆ ಹಣವನ್ನು ಕಾಶ್ಮೀರದ ಅಭಿವೃದ್ಧಿಗೆ ಬಳಸಬಹುದು ಎಂದ ಅವರು, ರಾಮ ಮಂದಿರ ನಿರ್ಮಾಣ ಮಾಡುವುದನ್ನು ನಾನು ಈಗಲೂ ವಿರೋಧಿಸುತ್ತೇನೆ ಎಂದರು.
ಹಿಂದುತ್ವದ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದ ಭಗವಾನ್ ಮೋದಿ ಹಾಗೂ ಅವರ ಆಡಳಿತದ ಬಗ್ಗೆ ಇದೇ ಮೊದಲ ಬಾರಿಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಈ ಕಾರಣಕ್ಕಾಗೆ ನಾನು ದೇಶದ ಹಿತದೃಷ್ಟಿಯಿಂದ ಮಾತನಾಡಿದ್ದೇನೆ. ಯಾರೂ ನನ್ನನ್ನು ತಪ್ಪು ತಿಳಿಯಬೇಡಿ ಎಂದು ಮನವಿ ಕೂಡ ಮಾಡಿದ್ದಾರೆ.