ಮೈಸೂರು: ಬ್ರಾಹ್ಮಣರನ್ನು ಬ್ರಾಹ್ಮಣರೆಂದರೆ, ಕ್ಷತ್ರಿಯರನ್ನು ಕ್ಷತ್ರಿಯರೆಂದರೆ, ವೈಶ್ಯರನ್ನು ವೈಶ್ಯರೆಂದರೆ ಸಂತಸಪಡುವಂತೆ ಶೂದ್ರರನ್ನು ಶೂದ್ರರೆಂದರೆ ಸಂತಸಪಡಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿರುವ ಭೋಪಾಲ್ನ ಸಂಸದೆ ಪ್ರಜ್ಞಾ ಠಾಕೂರ್ ವಿರುದ್ಧ ಪ್ರೊ ಕೆ.ಎಸ್. ಭಗವಾನ್ ವಾಗ್ದಾಳಿ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಭಗವಾನ್, ಪ್ರಜ್ಞಾ ಠಾಕೂರ್ಗೆ ಹಿಂದೂ ಧರ್ಮದ ಬಗ್ಗೆ ಸಂಪೂರ್ಣ ಅರಿವಿಲ್ಲ. ಹಿಂದೂ ಧರ್ಮ ಎಂದರೆ ಕೇವಲ ಬ್ರಾಹ್ಮಣರ ಧರ್ಮವೇ ಹೊರತು, ಬೇರೆಯವರ ಧರ್ಮವಲ್ಲ. ಶೂದ್ರರೆಂದರೆ ಬ್ರಾಹ್ಮಣರ ಗುಲಾಮರು. ಶೂದ್ರರ ಬಗ್ಗೆ ಮನುಸ್ಮೃತಿಯಲ್ಲಿ ಉಲ್ಲೆಖವಿದೆ ಎಂದರು.
ಜನಿವಾರ ಹಾಕಿಕೊಳ್ಳದವರೆಲ್ಲರೂ ಶೂದ್ರರು ಎಂದು ಮನುಸ್ಮೃತಿಯಲ್ಲಿ ಉಲ್ಲೇಖವಾಗಿದೆ. ಅದರ ಪ್ರಕಾರ ಒಕ್ಕಲಿಗರು, ಲಿಂಗಾಯತರು, ಕುರುಬರು, ಉಪ್ಪಾರರು, ನಾಯಕರು ಹಾಗೂ ದಲಿತರೆಲ್ಲರೂ ಶೂದ್ರರೇ ಆಗಿದ್ದಾರೆ. ದೇಶದ ಜನಸಂಖ್ಯೆಯ ಶೇ. 95 ರಷ್ಟು ಮಂದಿ ಶೂದ್ರರಿದ್ದಾರೆ. ಮನು ಸ್ಮೃತಿಯಲ್ಲಿ ಉಲ್ಲೇಖವಾಗಿರುವುದನ್ನೇ ನಾನು ಹೇಳುತ್ತಿದ್ದೇನೆ ಎಂದರು.
ಇದನ್ನೂ ಓದಿ : ವಿವಾದಿತ ಹೇಳಿಕೆ: ಸಂಸತ್ತಿನ ರಕ್ಷಣಾ ಸಲಹಾ ಸಮಿತಿಯಿಂದ ಪ್ರಗ್ಯಾಗೆ ಗೇಟ್ಪಾಸ್..!
ಇದು ಮಾಧ್ಯಮಗಳಲ್ಲಿ ಪ್ರಚಾರವಾದರೆ ನಾನೇ ಈ ಮಾತನ್ನು ಹೇಳಿದ್ದೇನೆಂದುಕೊಂಡು ನನ್ನನ್ನು ಕೊಲ್ಲುವುದಾಗಿ, ಹೊಡೆಯುವುದಾಗಿ ಬೆದರಿಕೆ ಹಾಕುತ್ತಾರೆ. ನನಗೆ ಬೆದರಿಕೆ ಬಂದರೆ ನೀವು ನನ್ನ ಬೆಂಬಲಕ್ಕೆ, ಸಹಾಯಕ್ಕೆ ಬರಬೇಕು ಎಂದು ಮಾಧ್ಯಮ ಪ್ರತಿನಿಧಿಗಳನ್ನು ಕೋರುತ್ತೇನೆ ಎಂದು ಹೇಳಿದರು.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದ ಭಗವಾನ್, ರೈತರು ಅಶಕ್ತ ಜಾನುವಾರುಗಳನ್ನು ಮಾತ್ರ ಮಾರಾಟ ಮಾಡುತ್ತಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ರೈತರು ಅಶಕ್ತ ಜಾನುವಾರುಗಳನ್ನು ಸಾಕಬೇಕಾಗುತ್ತದೆ. ಇದು ರೈತರಿಗೆ ಹೊರೆಯಾಗಿ ಪರಿಣಮಿಸುತ್ತದೆ. ರೈತರು ತಮ್ಮ ಜಾನುವಾರುಗಳೊಂದಿಗೆ ಯಾವುದೇ ರೀತಿಯ ಭಾವುಕತೆ ಇಟ್ಟುಕೊಂಡಿರುವುದಿಲ್ಲ ಎಂದು ಹೇಳಿದರು.
ಅಮೆರಿಕದಲ್ಲಿ ಕೊಲ್ಲಲೆಂದೇ ದನಗಳನ್ನು ಸಾಕುತ್ತಾರೆ. ನಮ್ಮ ದೇಶದಲ್ಲಿ ಗೋಮಾಂಸ ರಫ್ತು ಮಾಡುವವರಲ್ಲಿ ಮೇಲ್ವರ್ಗದ ಬ್ರಾಹ್ಮಣರೇ ಹೆಚ್ಚಾಗಿದ್ದಾರೆ. ಯಜ್ಞ ಯಾಗಾದಿಗಳಿಗೂ ಗೋವುಗಳನ್ನು ಕೊಲ್ಲಲಾಗುತ್ತಿತ್ತು. ಬ್ರಾಹ್ಮಣರು ಕೂಡಾ ದನದ ಮಾಂಸ ತಿನ್ನುತ್ತಿದ್ದರೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಚರ್ಚೆ ನಡೆಸದೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ವಿಚಾರದಲ್ಲಿ ಮೊದಲಿನ ನಿಯಮ, ಪದ್ಧತಿಯೇ ಮುಂದುವರಿಯಬೇಕು ಎಂದರು.
ಇದನ್ನೂ ಓದಿ : ಗೋಡ್ಸೆ 'ದೇಶಭಕ್ತ' ಎಂದ ಪ್ರಗ್ಯಾ: ಲೋಕಸಭೆಯಲ್ಲಿ ಬಿಜೆಪಿ ಸಂಸದೆಯಿಂದ ಎಡವಟ್ಟು, ಜೋಶಿ ಸ್ಪಷ್ಟನೆ
ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರಿಂದ ಗದ್ದಲ ಗಲಾಟೆ ವಿಚಾರಕ್ಕೆ ಮಾತನಾಡಿ, ಮೇಲ್ಮನೆ ಎಂದರೆ ಚಿಂತಕರ ಚಾವಡಿ ಎನ್ನಲಾಗುತ್ತಿತ್ತು. ಸಮಾಜದ ವಿವಿಧ ವಲಯಗಳ ಅನುಭವಿಗಳು ಅಲ್ಲಿರುತ್ತಿದ್ದರು. ಆದರೆ, ಇತ್ತೀಚಿಗೆ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ವಿಧಾನ ಪರಿಷತ್ಅನ್ನು ಬಳಸಿಕೊಳ್ಳುತ್ತಿವೆ ಎಂದರು.
ತಮ್ಮ ಪಕ್ಷದವರನ್ನು ಆಯ್ಕೆ ಮಾಡಿಕೊಳ್ಳಲು ವಿಧಾನ ಪರಿಷತ್ತನ್ನು ಬಳಸಿಕೊಳ್ಳುತ್ತಿವೆ. ಪರಿಣಾಮ ಪರಿಷತ್ನ ಮೂಲ ಉದ್ದೇಶವೇ ಹಾಳಾಗಿ ಹೋಗಿದೆ. ಈ ಬಗ್ಗೆ ಇನ್ನು ಮುಂದಾದರೂ ರಾಜಕೀಯ ಪಕ್ಷಗಳು ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.
ಪಂಚಾಂಗ, ಜ್ಯೋತಿಷ್ಯ, ದೇವರು ಎಂಬುದೆಲ್ಲಾ ಕೇವಲ ಮೌಢ್ಯ ಹಾಗೂ ಕಂದಾಚಾರವಾಗಿದೆ. ಕೊರೊನಾ ಬರುತ್ತದೆ ಎಂದು ಯಾವ ಪಂಚಾಂಗವೂ ಹೇಳಲಿಲ್ಲ. ಯಾವ ಜ್ಯೋತಿಷಿಯೂ ಕೊರೊನಾ ಬರುತ್ತದೆಂದು ನುಡಿದಿರಲಿಲ್ಲ. ಕೊರೊನಾದಿಂದ ಜನರನ್ನು ರಕ್ಷಿಸಲು ಯಾವ ದೇವರು ಬರಲಿಲ್ಲ ಎಂದು ಲೇವಡಿ ಮಾಡಿದರು.