ಮೈಸೂರು: ಬಿಜೆಪಿ ಒಳಗೆ ಎಲ್ಲರೂ ಒತ್ತಡದಲ್ಲಿದ್ದಾರೆ. ರಾಜ್ಯ ನಾಯಕರು ಹಾಗೂ ಕೇಂದ್ರ ಬಿಜೆಪಿ ನಾಯಕರ ನಡುವೆ ಬಹಳ ವ್ಯತ್ಯಾಸಗಳಿವೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಶಾಸಕ ಕೃಷ್ಣಬೈರೇಗೌಡ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಗೆ ವೀಕ್ಷಕರಾಗಿ ಆಗಮಿಸಿದ ಶಾಸಕ ಕೃಷ್ಣಬೈರೇಗೌಡ ಮಾಧ್ಯಮಗಳ ಜೊತೆ ಮಾತನಾಡಿ, ಈಗಲೂ ಸಿದ್ದರಾಮಯ್ಯ ಅವರೆ ನಮ್ಮ ನಾಯಕರು. ಅವರ ಸಲಹೆಯಂತೆ ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಇದಕ್ಕೆ ಯಾವುದೇ ವಿರೋಧವಿಲ್ಲ. ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಸಮಯವಿದೆ. ಇನ್ನೂ 3 ವರ್ಷ ಸರ್ಕಾರದ ಅವಧಿಯಿದೆ. ನಾವು ಅಧ್ಯಕ್ಷರನ್ನ ಮಾಡ್ತೇವೆ. ಕಾಂಗ್ರೆಸ್ ವಿರೋಧ ಪಕ್ಷವಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಆಗುತ್ತಿದೆ. ಇನ್ನೂ ಸಚಿವ ಸಂಪುಟ ವಿಸ್ತರಣೆ ಮಾಡಿಲ್ಲ. ಇವರು 6 ಕೋಟಿ ಜನರಿಗೆ ಯಾವ ರೀತಿ ನ್ಯಾಯ ಕೊಡುತ್ತಾರೆ. 17 ಜನ ಸಚಿವರನ್ನು ಇಟ್ಟುಕೊಂಡು ಸರಿಯಾಗಿ ಜಿಲ್ಲೆಗಳಿಗೆ ಉಸ್ತುವಾರಿ ಮಂತ್ರಿಗಳನ್ನು ನೇಮಕ ಮಾಡಿಲ್ಲ. ಪ್ರವಾಹಕ್ಕೆ ಒಳಗಾದ ಜನರ ಕಷ್ಟ ಕೇಳುವವರು ಯಾರೂ ಇಲ್ಲ. ಇನ್ನು, ಕೆಪಿಸಿಸಿ ಅಧ್ಯಕ್ಷರ ನೇಮಕಾತಿಯನ್ನು ಮಾಧ್ಯಮಗಳ ವರದಿ ಬಿಟ್ಟರೆ, ಎಐಸಿಸಿ ಇಂದ ಯಾವುದೇ ಅಧಿಕೃತ ಆಯ್ಕೆ ನಡೆದಿಲ್ಲ ಎಂದರು.
ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಪಕ್ಷದ ಒಳಗೆ ಎಲ್ಲರೂ ಒತ್ತಡದಲ್ಲಿದ್ದಾರೆ. ಕೇಂದ್ರ ಬಿಜೆಪಿ ನಾಯಕರು ಹಾಗೂ ರಾಜ್ಯ ಬಿಜೆಪಿ ನಾಯಕರ ನಡುವೆ ವ್ಯತ್ಯಾಸಗಳಿವೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.