ಮೈಸೂರು : ಆತುರಾತುರವಾಗಿ ಪೈಪ್ಲೈನ್ ಮೂಲಕ ಗ್ಯಾಸ್ ವಿತರಣೆ ಯೋಜನೆ ಜಾರಿಗೆ ತರಲು ಹೊರಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯ ಬಗ್ಗೆ ಚರ್ಚೆ ಮಾಡಿ ಯೋಜನೆ ತರುವುದು ಒಳ್ಳೆಯದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಬಿಜೆಪಿ ಸಂಸದ ಹೆಡ್ ಲಾಂಗ್ ಇರುವಂತಹ ವ್ಯಕ್ತಿ. ಪೈಪ್ಲೈನ್ ಗ್ಯಾಸ್ ಯೋಜನೆ ಅವರ ಮನೆಗೆ ತರುವಂತಹ ಯೋಜನೆಯಲ್ಲ. ಇದು ಸಾರ್ವಜನಿಕ ಯೋಜನೆ. ಹಾಗಾಗಿ, ಇದರ ಸಾಧಕ-ಬಾಧಕಗಳ ಬಗ್ಗೆ ಮುಕ್ತವಾಗಿ ಸಾರ್ವಜನಿಕರಿಗೆ ತಿಳಿಸಬೇಕು.
ಅದನ್ನು ಬಿಟ್ಟು ಕಾರ್ಪೊರೇಷನ್ ಅನುಮತಿ ಪಡೆದು ಏಕಾಏಕಿ ಎಲ್ಲಾ ಮನೆಗೂ ಪೈಪ್ಲೈನ್ ಮೂಲಕ ಗ್ಯಾಸ್ ನೀಡುತ್ತೇವೆ. 500 ರೂ. ಗ್ಯಾಸ್ ನೀಡುತ್ತೇವೆ ಎಂದು ಸುಳ್ಳು ಹೇಳುವುದು ಸರಿಯಲ್ಲ ಎಂದರು.
ಗ್ಯಾಸ್ ಪೈಪ್ ಯೋಜನೆ ವಹಿಸಿಕೊಂಡಿರುವ ಖಾಸಗಿ ಕಂಪನಿಯವರು ದರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಇದನ್ನ ಪ್ರತಾಪ್ ಸಿಂಹ ಪತ್ರಿಕಾಗೋಷ್ಠಿಯಲ್ಲಿ ಮರೆಮಾಚಿ ತಪ್ಪು ಮಾಹಿತಿಯನ್ನು ರವಾನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಖಾಸಗಿ ಕಂಪನಿಯ ದರದ ಪಟ್ಟಿಯ ಪ್ರಕಾರ, ಗ್ಯಾಸ್ ಕನೆಕ್ಷನ್ ತೆಗೆದುಕೊಳ್ಳಲು 6000 ಸಾವಿರ ರೂ. ಠೇವಣಿ ಇಡಬೇಕು. ಇದರ ಜೊತೆಗೆ ಗ್ಯಾಸ್ ಕನೆಕ್ಷನ್ಗೆ 750 ರೂ. ಮತ್ತು ಆಪರೇಷನ್ ಚಾರ್ಜ್ ₹350 ತೆಗೆದುಕೊಳ್ಳುತ್ತಾರೆ. ಒಂದು ಪೈಪ್ಲೈನ್ ಗ್ಯಾಸ್ ಕನೆಕ್ಷನ್ ತೆಗೆದುಕೊಳ್ಳಲು 7500 ರೂಪಾಯಿ ಕಟ್ಟಬೇಕು. ನಂತರ ಉಪಯೋಗಿಸುವಷ್ಟು ಗ್ಯಾಸ್ಗೆ ಬಿಲ್ ಪಾವತಿ ಮಾಡಬೇಕು. ಬಿಲ್ ಪಾವತಿ ಮಾಡುವುದು ತಡವಾದರೆ ಅದಕ್ಕೂ ದಂಡವನ್ನು ಹಾಕುತ್ತಾರೆ. ಜೊತೆಗೆ ಗ್ಯಾಸ್ ಕನೆಕ್ಷನ್ ತೆಗೆಯುತ್ತಾರೆ.
ಜನರು ಗ್ಯಾಸ್ ಕನೆಕ್ಷನ್ ತೆಗೆದಿರುವುದಕ್ಕೆ ಮತ್ತೆ ಗ್ಯಾಸ್ ಕನೆಕ್ಷನ್ ಪಡೆಯಲು 650 ರೂ. ನೀಡಬೇಕು. ಇಷ್ಟೊಂದು ಬೆಲೆಯಾದರೆ ಸಾಮಾನ್ಯ ಜನರು ಬದುಕುವುದು ಹೇಗೆ?. ಈ ವಿಷಯಗಳನ್ನ ಮರೆಮಾಚಿದ್ದಾರೆ ಪ್ರತಾಪ್ ಸಿಂಹ ಎಂದು ಆರೋಪಿಸಿದರು.
ಜನರಿಗೆ ಪೈಪ್ಲೈನ್ ಮೂಲಕ ಗ್ಯಾಸ್ ನೀಡುವ ವ್ಯವಸ್ಥೆಯ ಆಯ್ಕೆಯನ್ನ ಅವರಿಗೆ ಬಿಡಿ. ಬೇಕು ಎನ್ನುವವರು ಹಾಕಿಸಿಕೊಳ್ಳುತ್ತಾರೆ. ಈ ಯೋಜನೆ ಬೇಡ ಎನ್ನುವವರು ಹಾಕಿಸಿಕೊಳ್ಳುವುದಿಲ್ಲ. ಯಾಕೆ ಸಾಮಾನ್ಯ ಜನರ ಮೇಲೆ ಒತ್ತಡ ಹೇರುತ್ತೀರಿ. ಅದನ್ನು ಸಾರ್ವಜನಿಕವಾಗಿ ಚರ್ಚಿಸಿ. ಅದನ್ನ ಬಿಟ್ಟು ಯೋಜನೆ ಅನುಷ್ಠಾನಗೊಳಿಸುತ್ತೇನೆ ಎನ್ನುವುದು ತಪ್ಪು ಎಂದರು.
ಈ ಯೋಜನೆಯಲ್ಲಿ ಬಿಜೆಪಿಯ ಹಿಡನ್ ಅಜೆಂಡಾವೂ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವಾಗ ಸಿಲಿಂಡರ್ಗೆ ಸಬ್ಸಿಡಿ ನೀಡುತ್ತಿತ್ತು. ಆಗ ಒಂದು ಸಿಲಿಂಡರ್ ಬೆಲೆ ₹340 ಇತ್ತು.
ಈಗ 1000 ರೂ. ಆಗಿದೆ. ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಬ್ಸಿಡಿ ವ್ಯವಸ್ಥೆಯನ್ನ ಜಾರಿಗೆ ತರುತ್ತಾರೆ. ಇದನ್ನ ತಡೆಯಲು ಸಿಲಿಂಡರ್ ವ್ಯವಸ್ಥೆಯನ್ನೇ ಕಿತ್ತು ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಈ ಯೋಜನೆ ಕೇಂದ್ರದ ಮಹತ್ವದ ಯೋಜನೆ ಅಲ್ಲ. ಇದು ಖಾಸಗಿ ಕಂಪನಿಗಳ ಯೋಜನೆ. ಇದು ಸಿಂಗಾಪುರ್ ಕಂಪನಿ ಯೋಜನೆ ಎಂದು ಆರೋಪಿಸಿದರು. ಈ ಯೋಜನೆಯ ಬಗ್ಗೆ ಬಿಜೆಪಿಯ ಕೆಲವು ಶಾಸಕರು ವಿರೋಧಿಸಿದ್ದಾರೆ. ಕೆಲವರು ಸಂಸದರೆ 10% ಕಮಿಷನ್ ತೆಗೆದುಕೊಂಡಿದ್ದಾರೆ.
ಶಾಸಕರಿಗೆ ನೀಡಿಲ್ಲ ಎಂದು ಹೇಳುತ್ತಾರೆ. ಹಾಗಾಗಿ, ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳುತ್ತಾರೆ. ಶಾಸಕರು ನಾವು ಕಮಿಷನ್ ಕೇಳಿಲ್ಲ. ಈ ಯೋಜನೆಯ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದ್ದೇವೆ ಎನ್ನುತ್ತಾರೆ. ಈ ರೀತಿಯಾಗಿ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಓದಿ: ಹು-ಧಾ ಮಹಾನಗರ ಪಾಲಿಕೆಯಲ್ಲಿ ಈ ಬಾರಿಯೂ ಅಧಿಕಾರಶಾಹಿ ಬಜೆಟ್.. ಜನಪ್ರತಿನಿಧಿಗಳ ಕೈತಪ್ಪಿದ ಆಯವ್ಯಯ ಮಂಡನೆ ಅವಕಾಶ