ಮೈಸೂರು: ಮುಂದಿನ 5 ತಿಂಗಳಲ್ಲಿ ರಾಜಕೀಯದಲ್ಲಿ ಬದಲಾವಣೆ ಸಾಧ್ಯತೆ ಇದ್ದು, ಸಿಎಂ ಬದಲಾವಣೆ ಮಾಡುವುದಕ್ಕೆ ಬಿಜೆಪಿಯಲ್ಲೇ ತೆರೆಮರೆ ಕಸರತ್ತು ನಡೆಯುತ್ತಿದೆ. ಜೆಡಿಎಸ್ 37 ಶಾಸಕರ ಜೊತೆ ಹೆಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪ ಜೊತೆ ಸೇರಿ ಮತ್ತೊಂದು ಆಟ ಆಡೋಣ ಅನ್ಕೊಂಡಿರಬೇಕು ಎಂದು ಕೆಪಿಸಿಸಿ ವಕ್ತಾರ ಎಮ್.ಲಕ್ಷ್ಮಣ್ ಹೇಳಿದರು.
ಇಂದು ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ 5 ತಿಂಗಳಲ್ಲಿ ರಾಜಕೀಯದಲ್ಲಿ ಬದಲಾವಣೆ ಸಾಧ್ಯತೆ ಇದ್ದು, ಸಿಎಂ ಬದಲಾವಣೆ ಮಾಡುವುದಕ್ಕೆ ಬಿಜೆಪಿ ಪಕ್ಷದಲ್ಲೇ ತೆರೆಮರೆ ಕಸರತ್ತು ನಡೆಯುತ್ತಿದೆ. ಕುಮಾರಸ್ವಾಮಿಯವರ ಎಲ್ಲಾ ಆಟಗಳು ನಮಗೆ ಗೊತ್ತಿದೆ. ಕಾಂಗ್ರೆಸ್ ಮತ್ತೆ ಜೆಡಿಎಸ್ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ.
ಈಗ ಸೋನಿಯಾ ಗಾಂಧಿಗೂ ಜೆಡಿಎಸ್ ಬಣ್ಣ ಗೊತ್ತಾಗಿದ್ದು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬರೇ ಸುಳ್ಳು ಹೇಳಿದ್ದರು. ಯಾರಾದರೂ ಅರಮನೆ ಬರೆದುಕೊಡಿ ಎಂದಿದ್ದರೆ ಓಕೆ ಅನ್ನುತ್ತಿದ್ದರು. ಮುಂದೆ ಯಾವುದೇ ಕಾರಣಕ್ಕೆ ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ. ಈ ಬಗ್ಗೆ ಕೆಪಿಸಿಸಿಯಿಂದ ಎಐಸಿಸಿಗೆ 200 ಪುಟದ ವರದಿ ಸಲ್ಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಜೆಡಿಎಸ್ ವಿರುದ್ಧ ವಾಗ್ದಾಳಿ : ಭೂ ಸುಧಾರಣೆ ಕಾಯ್ದೆಗೆ ಬೆಂಬಲ ನೀಡಿದ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್ ಹೆಸರು ತೆಗೆದು ಬಿಜೆಪಿಯ 'ಬಿ' ಟೀಂ ಎಂದು ಘೋಷಣೆ ಮಾಡಿ. ಇಲ್ಲ ಜನ ನಿಮ್ಮನ್ನು ಜೋಕರ್ ಎಂದು ಕರೆಯುತ್ತಾರೆ. ಮಾಜಿ ಸಿಎಂ ಹೆಚ್‌ಡಿಕೆ ಮತ್ತು ದೇವೇಗೌಡರೇ ನಿಮ್ಮ ತತ್ವ ಸಿದ್ಧಾಂತವನ್ನು ಜನರಿಗೆ ತಿಳಿಸಿ. ಮಾತೆತ್ತಿದರೆ ಸಾಲಮನ್ನಾ ಬಗ್ಗೆ ಹೇಳುತ್ತೀರಾ.. ಆ ಹಣವನ್ನು ನಿಮ್ಮ ಮನೆಯಿಂದ ತಂದಿರಾ ಎಂದು ಪ್ರಶ್ನಿಸಿದರು.
ಬಿ ಸಿ ಪಾಟೀಲ್ ವಿರುದ್ಧ ಗುಡುಗು : ಕೃಷಿ ಸಚಿವರು ರೈತರನ್ನು ಹೇಡಿಗಳಿಗೆ ಹೋಲಿಸುತ್ತಾರೆ. ಇಲ್ಲಿ ತನಕ ಒಬ್ಬ ಬಿಜೆಪಿಯವರು ಇವರ ಹೇಳಿಕೆ ವಿರೋಧಿಸುತ್ತಿಲ್ಲ. ಹೇಡಿ ಕೆಲಸ ಮಾಡಿದ್ದು ನೀವು, ಪಕ್ಷದ ಚಿಹ್ನೆಯಲ್ಲಿ ಗೆದ್ದು ಪಕ್ಷಕ್ಕೆ ಮೋಸ ಮಾಡಿಹೋದ ನೀವು ಹೇಡಿಗಳು. ಬಾಂಬೆಯಲ್ಲಿ 20 ಕೋಟಿ ಪಡೆದು ಹೋಗಿ ಅವಿತು ಕುಳಿತರಲ್ಲ, ನೀವು ಹೇಡಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಮಾರಕ ಕಾಯ್ದೆಗಳಿವು : ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳು ರೈತರಿಗೆ ಮತ್ತು ದೇಶಕ್ಕೆ ಮಾರಕವಾಗಿವೆ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳುತ್ತಿರುವ ಕೇಂದ್ರ ಸರ್ಕಾರ ಮಾರಕ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಆದಾನಿ ಮತ್ತು ಅಂಬಾನಿ ಮೊದಲಾದ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಇದನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೂ ಸರ್ಕಾರ ಬಗ್ಗದೆ ಕೇವಲ ಆಶ್ವಾಸನೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದರು.
ಓದಿ : ಸರ್ಕಾರದ ವಿರುದ್ಧ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್
ಸ್ಕೂಲ್ ತೆರೆಯುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲ : ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆನ್ಲೈನ್ ತರಗತಿಗಳಿಂದ ಮಕ್ಕಳಿಗೆ ಅನುಕೂಲವಾಗುತ್ತಿಲ್ಲ. 10, 11, 12ನೇ ತರಗತಿಗಳು ವಿದ್ಯಾರ್ಥಿಗಳಿಗೆ ಜೀವನದ ಮಹತ್ವದ ಘಟ್ಟ. ಈ ತರಗತಿಗಳ ಪಠ್ಯಕ್ರಮಗಳನ್ನು ಕಟ್ ಮಾಡಿ ಪಾಸ್ ಮಾಡಿದ್ರೆ ಮುಂದಿನ ಭವಿಷ್ಕಕ್ಕೆ ತೊಂದರೆಯಾಗುತ್ತದೆ. ಡಿ.15ರೊಳಗೆ ಶಾಲೆಗಳನ್ನು ಆರಂಭಿಸುವಂತೆ ಮನವಿ ಮಾಡಿದರು.
ನಾವು ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಭೂ ಸ್ವಾಧೀನ ಕಾಯ್ದೆಯನ್ನು ವಾಪಸ್ ಪಡೆಯುತ್ತೇವೆ. ಕಾರ್ಮಿಕ ವಿರೋಧಿ ಕಾಯ್ದೆ ಸೇರಿ ಬಿಜೆಪಿಯ ಜನ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ ಎಂದು ಇದೇ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.