ಮೈಸೂರು: ಕೊಲೆಯ ಪ್ರತೀಕಾರಕ್ಕಾಗಿ ಹತ್ಯೆ ಮಾಡಿದ್ದೇವೆ ಎಂದು ಫೋನ್ ಮಾಡಿ ಪೊಲೀಸರಿಗೆ ಸ್ಥಳ ತಿಳಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಷಯವನ್ನ ಡಿಸಿಪಿ ಪ್ರಕಾಶಗೌಡ ಬಹಿರಂಗಪಡಿಸಿದ್ದಾರೆ.
![ಕೊಂದು ಪೊಲೀಸರಿಗೆ ಕರೆ ಮಾಡಿದ ಕಿರಾತಕರು](https://etvbharatimages.akamaized.net/etvbharat/prod-images/kn-mys-6-murder-issue-dcp-byte-7208092_08052020152859_0805f_1588931939_842.jpg)
ಕಳೆದ ಸೋಮವಾರ ಕ್ಷುಲ್ಲಕ ಕಾರಣಕ್ಕಾಗಿ ಸತೀಶ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದು, ಈ ಸಂಬಂಧ ಕಿರಣ್ ಮತ್ತು ಮಧು ಎಂಬ ಯುವಕರನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಮಧು ಎಂಬ ಆರೋಪಿ ಯುವಕನ ಮತ್ತೊಬ್ಬ ಸಹೋದರ ಅಭಿ ಎಂಬಾತ ಹೊರಗೆ ಇದ್ದ. ಸೋಮವಾರ ಕೊಲೆಯಾದ ಸತೀಶ್ ಸ್ನೇಹಿತರಾದ ಇರ್ಫಾನ್ ಮತ್ತು ಮಹೇಂದ್ರ ಎಂಬುವವರು ಅಭಿ ಎಂಬ ಯುವಕನನ್ನು ಫೋನ್ ಮಾಡಿ ಕರೆಸಿಕೊಂಡು ಭೀಕರವಾಗಿ ಕೊಲೆ ಮಾಡಿದ್ದಾರೆ. ಬಳಿಕ ನಜರ್ ಬಾದ್ ಪೊಲೀಸರಿಗೆ ಕೊಲೆ ಮಾಡಿದ್ದೇವೆ ಎಂದು ಕರೆ ಮಾಡಿದ್ದಾರೆ. ಈ ಯುವಕರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇಬ್ಬರು ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ. ಈ ನಾಲ್ಕು ಜನರು ಮದ್ಯಪಾನದ ಅಮಲಿನಲ್ಲಿ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರಕಾಶ್ ಗೌಡ ಮಾಹಿತಿ ನೀಡಿದ್ದಾರೆ.