ಮೈಸೂರು: ಅರಮನೆಯಲ್ಲಿ ಶರನ್ನವರಾತ್ರಿಯ ಪ್ರಮುಖ ಆಕರ್ಷಣೆ ಖಾಸಗಿ ದರ್ಬಾರ್. ರತ್ನ ಖಚಿತ ಸಿಂಹಾಸನದಲ್ಲಿ ಹಿಂದಿನ ಕಾಲದ ರಾಜರು ನಡೆಸುತ್ತಿದ್ದ ದರ್ಬಾರ್ನ ಸಂಪ್ರದಾಯವನ್ನು ಇಂದಿಗೂ ನವರಾತ್ರಿ ಸಂದರ್ಭದಲ್ಲಿ ಆಚರಿಸುವ ಮೂಲಕ ರಾಜಮನೆತನದ ಪರಂಪರೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ.
ಹಿಂದಿನ ಕಾಲದಲ್ಲಿ ದರ್ಬಾರ್ನಲ್ಲಿ ಯಾವ ರೀತಿ ನಡೆಯುತ್ತಿತ್ತೋ ಹಾಗೆಯೇ ನವರಾತ್ರಿ ಸಮಯದಲ್ಲಿ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸುತ್ತಾರೆ. 9 ದಿನಗಳ ಕಾಲ ಅರಮನೆಯ ದರ್ಬಾರ್ ಹಾಲ್ನಲ್ಲಿ ರತ್ನ ಖಚಿತ ಸಿಂಹಾಸನವನ್ನು ಪೂಜೆ ಮಾಡಿ, ಖಾಸಗಿ ದರ್ಬಾರ್ ನಡೆಸಿಕೊಂಡು ಹೋಗುವ ಸಂಪ್ರದಾಯವನ್ನು ಮುಂದುವರೆಸಲಾಗುತ್ತಿದೆ.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹಿಂದೆ ರಾಜ ಮನೆತನ ಇತ್ತು. ರಾಜರ ಆಳ್ವಿಕೆ ಇತ್ತು. ಆದರೆ ಈಗ ರಾಜರ ಆಳ್ವಿಕೆ ಇಲ್ಲ. ಆದ ಕಾರಣ ರಾಜಪರಂಪರೆಯ ಪ್ರತೀಕವಾದ ಖಾಸಗಿ ದರ್ಬಾರ್ಅನ್ನು ನವರಾತ್ರಿಯ ಸಮಯದಲ್ಲಿ 9 ದಿನಗಳ ಕಾಲ ಅರಮನೆಯ ದರ್ಬಾರ್ ಹಾಲ್ನಲ್ಲಿ ಸಾಂಪ್ರದಾಯಿಕವಾಗಿ ಆಚರಿಸುತ್ತೇವೆ ಎಂದರು.