ಮೈಸೂರು: ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಕಪಿಲ ನದಿಗೆ ಬಿಡುತ್ತಿದ್ದು, ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪುರಾತನ ಪ್ರಸಿದ್ಧ ಶ್ರೀ ಪರಶುರಾಮ ದೇವಾಲಯಕ್ಕೆ ಪ್ರವಾಹದ ನೀರು ನುಗ್ಗಿದ ಹಿನ್ನೆಲೆ ಶ್ರಾವಣ ಮಾಸದ ಪೂಜೆ ರದ್ದಾಗಿದೆ.
ಕಬಿನಿ ಜಲಾಶಯ ಭರ್ತಿ: ಕೇರಳದ ವಯನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಹಾಗಾಗಿ ಕಬಿನಿ ಜಲಾಶಯ ಭರ್ತಿ ಆಗಿದೆ. ಹೆಚ್ಚುವರಿ ನೀರನ್ನು ಕಪಿಲ ನದಿಗೆ ಬಿಡಲಾಗುತ್ತಿದೆ. ಇದರಿಂದ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ಸಮೀಪದ ಸ್ನಾನ ಘಟ್ಟ, ಮಂಟಪಗಳು ಹಾಗೂ ಭಕ್ತರು ಬಟ್ಟೆ ಬದಲಾಯಿಸುವ ಶೆಡ್ಗಳಿಗೆ ಪ್ರವಾಹದ ನೀರು ನುಗ್ಗಿದೆ.
ಇದನ್ನೂ ಓದಿ: ಭಟ್ಕಳ ಮುಟ್ಟಳ್ಳಿಯಲ್ಲಿ ಮತ್ತೆ ಗುಡ್ಡಕುಸಿತ : ಹತ್ತಕ್ಕೂ ಅಧಿಕ ಕುಟುಂಬ ಸ್ಥಳಾಂತರ
ಕಪಿಲ ನದಿ ದಡದಲ್ಲಿರುವ ಐತಿಹಾಸಿಕ 16 ಸಾಲು ಮಂಟಪ ಭಾಗಶಃ ಮುಳುಗಡೆಯಾಗಿದೆ. ಮಳೆ ಹೀಗೆ ಮುಂದುವರಿದರೆ ಹೆಚ್ಚುವರಿ ನೀರನ್ನು ನದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ನಂಜನಗೂಡಿನ ಜನತೆಯಲ್ಲಿ ಪ್ರವಾಹ ಭೀತಿ ಹೆಚ್ಚಾಗಲಿದೆ.