ಮೈಸೂರು: ಕೂಡು ದಂತದ ಭೋಗೇಶ್ವರ ಸಹಜ ಸಾವಿನ ನಂತರ ಅದೇ ಸ್ಥಳದಲ್ಲಿ ಕೂಡು ದಂತದ ಜೂನಿಯರ್ ಭೋಗೇಶ್ವರ ವನ್ಯ ಪ್ರಿಯರ ಮನ ಗೆದ್ದಿದೆ. ಕಬಿನಿ ಹಿನ್ನೀರಿಗೆ ಬರುವ ಪ್ರವಾಸಿಗರ ಆಕರ್ಷಣೆಯೇ ಈ ಜೂನಿಯರ್ ಭೋಗೇಶ್ವರ. ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಪ್ರವಾಸಿಗರಿಗೆ ಆಕರ್ಷಣೆಯಾಗಿದ್ದ ಭೋಗೇಶ್ವರ ಎಂಬ ಆನೆ ವಯೋ ಸಹಜ ಅನಾರೋಗ್ಯದಿಂದ ಇತ್ತೀಚೆಗೆ ಮೃತಪಟ್ಟಿತ್ತು.
ತನ್ನದೇ ಆದ ವಿಭಿನ್ನ ಹಾವಭಾವ, ಗಾಂಭೀರ್ಯ ನಡಿಗೆ, ಉದ್ದನೆಯ ಕೂಡು ದಂತದಿಂದ ಭೋಗೇಶ್ವರ ಆನೆ ವನ್ಯ ಪ್ರಿಯರಿಗೆ ಇಷ್ಟವಾಗಿತ್ತು. ಅದರ ಸಾವಿನ ಸುದ್ದಿ ತಿಳಿದು ಕಬಿನಿ ಹಿನ್ನೀರಿಗೆ ಬರುವ ಪ್ರವಾಸಿಗರು ತುಂಬಾ ಬೇಸರಗೊಂಡಿದ್ದರು. ಆದರೆ ಇದೇ ಭೋಗೇಶ್ವರ ಇರುತ್ತಿದ್ದ ಅರಣ್ಯ ಪ್ರದೇಶದಲ್ಲಿ ಅದೇ ರೀತಿಯ ಕೂಡು ದಂತದ 30ರಿಂದ 35 ವರ್ಷ ವಯಸ್ಸಿನ ಜೂನಿಯರ್ ಭೋಗೇಶ್ವರನ ದರ್ಶನವಾಗಿದೆ. ಇದರಿಂದ ಪ್ರವಾಸಿಗರು ಕುಶ್ ಆಗಿದ್ದಾರೆ.
ಈ ರೀತಿ ಕಾಣಿಸಿಕೊಳ್ಳಲು ಕಾರಣವೇನು : ಕಬಿನಿ ಹಿನ್ನೀರಿನಲ್ಲಿ ಮೃತಪಟ್ಟ 70 ವರ್ಷದ ಉದ್ದನೆಯ ಕೂಡು ದಂತದ ಆನೆಯ ರೀತಿಯಲ್ಲಿ ಮತ್ತೊಂದು ಜೂನಿಯರ್ ಭೋಗೇಶ್ವರ ಕಾಣಿಸಿಕೊಂಡಿದೆ. ವಂಶವಾಹಿ ಒಂದೇ ರೀತಿ ಇದ್ದರೆ ಈ ರೀತಿ ಕೂಡು ದಂತದ ಆನೆ ಇರುವುದು ಸಹಜ.
![elephant](https://etvbharatimages.akamaized.net/etvbharat/prod-images/15968042_thumb.jpeg)
ಸಾಮಾನ್ಯವಾಗಿ ಹಾಸನ, ಕೊಡಗು ಭಾಗದಲ್ಲಿ ದೊಡ್ಡ ಆನೆಗಳಿದ್ದರು ದಂತದ ರಚನೆ ಮಾತ್ರ ಚಿಕ್ಕದಾಗಿರುತ್ತದೆ. ಆದರೆ ಬಂಡೀಪುರ ಹಾಗೂ ನಾಗರಹೊಳೆ ಭಾಗದಲ್ಲಿ ಇರುವ ಆನೆಗಳ ದೇಹದ ರೂಪಕ್ಕೆ ತಕ್ಕಂತೆ ದಂತವು ಸಹ ದೊಡ್ಡದಾಗಿರುತ್ತದೆ. ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಉದ್ದನೆಯ ಕೂಡು ದಂತದ ಆನೆಗಳು ಇರುವುದು ಕಂಡುಬರುತ್ತಿದ್ದು, ಇದಕ್ಕೆ ಮೃತಪಟ್ಟ ಭೋಗೇಶ್ವರ ಆನೆಯ ವಂಶವಾಹಿನಿಗಳು ಕಾರಣ ಇರಬಹುದು ಎನ್ನುತ್ತಾರೆ ತಜ್ಞರು.
![elephant](https://etvbharatimages.akamaized.net/etvbharat/prod-images/15968042_thu.jpeg)
ಆಕರ್ಷಣೆಯ ಬಿಂದು ಜೂನಿಯರ್ ಭೋಗೇಶ್ವರ: ಅತಿಹೆಚ್ಚು ಆನೆಗಳನ್ನು ಹೊಂದಿರುವ ಪ್ರದೇಶವಾದ ಬಂಡೀಪುರ ನಾಗರಹೊಳೆ ಅರಣ್ಯ ಪ್ರದೇಶದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಸಫಾರಿ ಇರುವುದರಿಂದ ಈ ಭಾಗಕ್ಕೆ ಅತಿಹೆಚ್ಚು ಪ್ರವಾಸಿಗರು ಹಾಗೂ ಪ್ರಾಣಿ ಪ್ರಿಯರು ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ಇವರಿಗೆ ಉದ್ದನೆಯ ಕೂಡು ದಂತದ ಆನೆಗಳು ಕಾಣಿಸಿಕೊಳ್ಳುತ್ತದೆ. ಅದನ್ನು ಸಫಾರಿಗೆ ಬಂದ ಜನರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಮೂಲಕ ಅತಿಹೆಚ್ಚು ಪ್ರಚಾರಕ್ಕೆ ಬರುತ್ತವೆ. ಅದೇ ರೀತಿ 70 ವರ್ಷದ ಭೋಗೇಶ್ವರ ಸಾವಿನ ನಂತರ ಇದೇ ಸ್ಥಳದಲ್ಲಿ ಅದೇ ರೀತಿಯ ಆನೆ ಜನರಿಗೆ ತನ್ನ ಉದ್ದನೆಯ ಕೂಡು ದಂತದಿಂದ ಆಕರ್ಷಣೆ ಮಾಡುತ್ತಿದ್ದು ಪ್ರವಾಸಿಗರಿಗೆ ಖುಷಿ ತಂದಿದೆ.
ಇದನ್ನೂ ಓದಿ : ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ಅರಮನೆ ನಿರ್ಮಾಣಕ್ಕೆ ವಿರೋಧ: ಆ.2ರಂದು ಕಿತ್ತೂರು ಬಂದ್