ಮೈಸೂರು: ಶಾಸಕ ಜಿ.ಟಿ. ದೇವೇಗೌಡ ಜೆಡಿಎಸ್ನಲ್ಲೆ ಇದ್ದಾರೆ. ಸಧ್ಯದಲ್ಲೇ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
![Nikhil Kumaraswamy](https://etvbharatimages.akamaized.net/etvbharat/prod-images/kn-mys-04-nikhil-kumaraswamy-news-7208092_20012021230338_2001f_1611164018_729.jpg)
ಕೆಆರ್ ನಗರ ತಾಲ್ಲೂಕಿನ ಮೂಲೇಪೆಟ್ಲು ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಸ್ಥಳೀಯ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ವಿರೋಧ ಪಕ್ಷಗಳು. ಅವರ ಜೊತೆ ಕೈ ಜೋಡಿಸುವ ಅನಿವಾರ್ಯತೆ ನಮಗಿಲ್ಲ ಎಂದರು.
ಪಕ್ಷದಲ್ಲಿ ನಿಷ್ಠಾವಂತ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ನಾವೆಲ್ಲ ಮುಂದಿನ ಬಾರಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನಿಸೋಣ, ಕುಮಾರಣ್ಣನ ಸಾಲ ಮನ್ನಾ ಯೋಜನೆ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಹಾಯವಾಗುತ್ತದೆ. ಒಳ್ಳೆಯ ಕೆಲಸಗಳು ಜನರನ್ನು ನೆನಪಿಸುವ ಕಾಲ ಬರುತ್ತದೆ. ನಾವು ಹೋರಾಟ ಮಾಡೋಣ ಎಂದ ನಿಖಿಲ್ ಕುಮಾರಸ್ವಾಮಿ, ಶಾಸಕ ಜಿ.ಟಿ. ದೇವೇಗೌಡ ಕಾಂಗ್ರೆಸ್ಗೆ ಹೋಗುತ್ತೇನೆ. ಬಿಜೆಪಿಗೆ ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಅವರು ಜೆಡಿಎಸ್ನಲ್ಲಿದ್ದಾರೆ.
ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು, ಸಣ್ಣ ಪುಟ್ಟ ಬಿನ್ನಾಭಿಪ್ರಾಯಗಳು ಇರುತ್ತವೆ, ಅವೆಲ್ಲವನ್ನು ಸರಿ ಪಡಿಸಿಕೊಂಡು ಹೋಗುತ್ತೇವೆ. ಜಿ. ಟಿ.ದೇವೇಗೌಡ ಈ ಭಾಗದ ಜನಪ್ರಿಯ ನಾಯಕರು. ಅವರ ಮಗ ಜಿ.ಟಿ.ಹರೀಶ್ ಗೌಡ ಜೊತೆ ನಾನಯ ಒಳ್ಳೆಯ ಸಂಬಂಧ ಹೊಂದಿದ್ದೇನೆ. ಸಧ್ಯದಲ್ಲಿ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂದರು.