ಮೈಸೂರು : ದೇಶದಲ್ಲಿ ಕೊರೊನಾ ಮಹಾಮಾರಿ ಜನರ ನೆಮ್ಮದಿ ಕಸಿದಿದೆ. ನಿತ್ಯ ದೇಶದ ಮೂಲೆ ಮೂಲೆಯಲ್ಲೂ ಸಾವು - ನೋವಿನ ಘಟನೆಗಳ ವರದಿಯಿಂದಾಗಿ, ಜನ ತತ್ತರಿಸಿದ್ದಾರೆ. ‘
ಅಲ್ಲದೇ ಕೊರೊನಾ ದೃಢವಾಯಿತೆಂದರೆ ಭಯದಲ್ಲೇ ದಿನದೂಡುವ ಜನತೆಯ ನಡುವೆ ಮೈಸೂರಿನ ಅವಿಭಕ್ತ ಕುಟುಂಬವೊಂದು ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದು ಬೀಗಿದೆ.
ಕೊರೊನಾ ಕಪಿಮುಷ್ಠಿಗೆ ಸಿಲುಕಿದ ಅವಿಭಕ್ತ ಕುಟುಂಬದ 17 ಮಂದಿ ಆತ್ಮಸ್ಥೈರ್ಯದಿಂದ ವೈರಸ್ ಮಣಿಸಿ ಮಾದರಿಯಾಗಿದ್ದಾರೆ. ಮೈಸೂರಿನ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ವಾಸವಾಗಿರುವ 17 ಮಂದಿಗೆ ಸೋಂಕು ತಗುಲಿದಾಗ ಇಡೀ ಕುಟುಂಬವೇ ಆತಂಕ ಹಾಗೂ ಭಯದಿಂದ ನಲುಗಿತ್ತು. ಆದರೆ, ಅವರಲ್ಲಿರುವ ಆತ್ಮಸ್ಥೈರ್ಯ ವೈರಸ್‌ನ ಮನೆಯಿಂದಾಚೆ ತಳ್ಳಿದೆ.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರರ ಸಹೋದರ ಲಿಂಗೇರಾಜೇಗೌಡರಿಗೆ ಕಳೆದ ತಿಂಗಳ 24 ರಂದು ಕೊರೊನಾ ಪಾಸಿಟಿವ್ ಆಗಿತ್ತು. ಇವರ ಮೂಲಕ ಮನೆಯಲ್ಲಿರುವ 16 ಮಂದಿಗೂ ಸೋಂಕು ವಕ್ಕರಿಸಿತ್ತು. ಆದ್ರೆ, ಎಲ್ಲಾ 17 ಮಂದಿಯೂ ಈಗ ಗುಣಮುಖರಾಗಿದ್ದಾರೆ.
ಕೊರೊನಾ ದೃಢಪಟ್ಟ ಬಳಿಕ ಆತಂಕ್ಕೊಳಗಾಗದ ಕುಟುಂಬಸ್ಥರು, ಬಡಗಲಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಲೀಂ ಪಾಷಾ ಅವರಿಗೆ ಮಾಹಿತಿ ನೀಡಿದ್ದರು. ಮನೆಯಲ್ಲಿಯೇ ಒಬ್ಬೊಬ್ಬರಿಗೆ ಒಂದೊಂದು ಜಾಗ ಗುರುತು ಮಾಡಿಕೊಂಡರು.
ಅವರ ತಟ್ಟೆ, ಹೊದಿಕೆ, ಚಾಪೆಯನ್ನು ಪಾಲು ಮಾಡಿಕೊಂಡರು. ಅವರ ಕೆಲಸವನ್ನು ಅವರೇ ಮಾಡಿಕೊಂಡರು. ಬಟ್ಟೆ, ತಟ್ಟೆಯನ್ನು ಬೇರೆಯವರು ಮುಟ್ಟಲಿಲ್ಲ. ಹೀಗಾಗಿ, ಅಚ್ಚರಿ ಎಂಬಂತೆ ಇದೀಗ ಎಲ್ಲರೂ ಸೋಂಕಿನಿಂದ ಪಾರಾಗಿದ್ದಾರೆ.
ವಾಸದ ಮನೆಯಲ್ಲೇ ಎಲ್ಲರನ್ನ ಹೋಮ್ ಐಸೊಲೇಷನ್ ಮಾಡಿ, ಹಂತ ಹಂತವಾಗಿ ಚಿಕಿತ್ಸೆ ನೀಡಲಾಯಿತು. ನಿತ್ಯ ಮನೆಗೆ ಭೇಟಿ ಕೊಟ್ಟು ಚಿಕಿತ್ಸೆ ನೀಡುತ್ತಿದ್ದ ವೈದ್ಯಾಧಿಕಾರಿ ಅವರಿಗೆಲ್ಲ ಧೈರ್ಯ ತುಂಬುತ್ತಿದ್ದರು.
ಕೊರೊನಾ ವಿರುದ್ಧ ದೃಢ ಮನಸ್ಸಿನಿಂದ ಹೋರಾಡಿದ 17 ಮಂದಿಯೂ ಕೊರೊನಾದಿಂದ ಗೆದ್ದಿದ್ದಾರೆ. ಕೊರೊನಾ ಪಾಸಿಟಿವ್ ಬಂದ ಕೂಡಲೇ ಭಯ ಪಡುವುದು ಬೇಡ. ಆತ್ಮಸ್ಥೈರ್ಯ ಇದ್ದರೆ ಎಂತಹ ಕಾಯಿಲೆಯನ್ನಾದರೂ ಎದುರಿಸಬಹುದು ಎಂಬುದನ್ನ ಈ ಅವಿಭಕ್ತ ಕುಟುಂಬ ನಿರೂಪಿಸಿದೆ.