ಮೈಸೂರು: ಜೆ.ಕೆ. ಟೈರ್ಸ್ ಕಾರ್ಖಾನೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿತರ ಚಿಕಿತ್ಸೆಗೆ ಕಾರ್ಖಾನೆಯವರೇ ವ್ಯವಸ್ಥೆ ಮಾಡಿಕೊಳ್ಳಬೇಕು, ಸರ್ಕಾರ ಬಡವರಿಗೆ ಮಾತ್ರ ಚಿಕಿತ್ಸೆ ಕೊಡಿಸುತ್ತದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಉದಯಗಿರಿಯಲ್ಲಿ ಸರ್ಕಾರಿ ಕಾಲೇಜನ್ನು ಕೋವಿಡ್ ಆಸ್ಪತ್ರೆಯಾಗಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿದ್ದು, ಅದರ ಉದ್ಘಾಟನಾ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು. ಎನ್.ಆರ್. ಮೊಹಲ್ಲಾದ ಕಡೆ ಸ್ಥಳದಲ್ಲೇ ಪರೀಕ್ಷೆ ಮಾಡುವ ವ್ಯವಸ್ಥೆಯಿಂದ ಒಳ್ಳೆಯ ಫಲಿತಾಂಶ ಸಿಕ್ಕಿದ್ದು , ಸುಮಾರು 700 ಟೆಸ್ಟ್ಗಳನ್ನು ಮನೆ ಮನೆಗೆ ಹೋಗಿ ಮಾಡಲಾಗಿದ್ದು, ಅದರಲ್ಲಿ 150 ಜನರಿಗೆ ಪಾಸಿಟಿವ್ ಬಂದಿದೆ ಎಂದರು.
ಜೆ.ಕೆ ಟೈರ್ಸ್ ಫ್ಯಾಕ್ಟರಿಯಲ್ಲಿ ಸಾವಿರಾರು ಜನ ಕಾರ್ಮಿಕರಿದ್ದು, ಈಗಾಗಲೇ 170 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರಿಗೆ ಹೆಲ್ತ್ ಇನ್ಶುರೆನ್ಸ್ ಇರುವುದರಿಂದ ಖಾಸಗಿ ಆಸ್ಪತ್ರೆಗೆ ಲಿಂಕ್ ಆಗಿ ಅವರೇ ಕೋವಿಡ್ ಸೆಂಟರ್ಗಳನ್ನು ಪ್ರಾರಂಭ ಮಾಡಿಕೊಂಡು ಚಿಕಿತ್ಸೆ ನೀಡಿ ಎಂದು ಹೇಳಿದ್ದೇವೆ. ಜಿಲ್ಲಾಡಳಿತ ತೀರಾ ಬಡವರಿಗೆ ಕೋವಿಡ್ ಚಿಕಿತ್ಸೆಯನ್ನು ನೀಡುತ್ತದೆ ಎಂದರು.